ಪಾಕ್ ಸುಳ್ಳು ಮುಖವಾಡ ಬಹಿರಂಗ: ಅಜ್ಮಲ್ ಕಸಬ್ ಪಾಕ್ ನಾಗರಿಕನೆಂದ ಮಾಜಿ ತನಿಖಾಧಿಕಾರಿ

ಮಂಗಳವಾರ, 4 ಆಗಸ್ಟ್ 2015 (18:25 IST)
ಕಳೆದ 2008ರ ನವೆಂಬರ್ 26 ರಂದು ನಡೆದ ಮುಂಬೈ ದಾಳಿಯ ಸಂಚು ಪಾಕಿಸ್ತಾನದ ನೆಲದಲ್ಲಿ ರೂಪಿಸಲಾಗಿತ್ತು ಎಂದು ಪಾಕಿಸ್ತಾನದ ಮಾಜಿ ಭದ್ರತಾಪಡೆಯ ಉನ್ನತಾಧಿಕಾರಿ ನೀಡಿದ ಹೇಳಿಕೆ ಪಾಕ್ ಸುಳ್ಳಿನ ಮುಖವಾಡವನ್ನು ಬಹಿರಂಗಪಡಿಸಿದೆ.
 
ಫೆಡರಲ್ ಇನ್‌ವೆಸ್ಟಿಗೇಶನ್ ಏಜೆನ್ಸಿಯ ಮಾಜಿ ಪ್ರಧಾನ ನಿರ್ದೇಶಕರಾಗಿದ್ದ ತಾರೀಕ್ ಖೋಸಾ, ಸ್ಥಳೀಯ ಡಾನ್ ಪತ್ರಿಕೆಗೆ ಸಂದರ್ಶನ ನೀಡಿ ಮುಂಬೈ ದಾಳಿಯಲ್ಲಿ ಗಲ್ಲಿಗೇರಿದ ಅಜ್ಮಲ್ ಕಸಬ್ ಕೂಡಾ ಪಾಕ್ ನಾಗರಿಕ ಎನ್ನುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. 
 
ಉಭಯ ದೇಶಗಳಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ನವಾಜ್ ಷರೀಫ್, ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಯಲಿ ಎಂದು ಹೇಳಿಕೆ ನೀಡಿರುವ ಮಧ್ಯೆಯೇ ತಾರೀಕ್ ಹೇಳಿಕೆ ಉರಿಯುವ ಬೆಂಕಿಯ ಮೇಲೆ ತುಪ್ಪ ಸುರಿದಂತಾಗಿದೆ.
 
ಮುಂಬೈ ದಾಳಿಯ ಸಂಚು ಪಾಕಿಸ್ತಾನದಲ್ಲಿಯೇ ರೂಪಿಸಲಾಗಿತ್ತು ಎನ್ನುವ ಹೇಳಿಕೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಮಾನ ಮರ್ಯಾದೆ ಹರಾಜು ಹಾಕಿದಂತಾಗಿದೆ.
 
ಪಾಕಿಸ್ತಾನದಲ್ಲಿ ಮುಂಬೈ ದಾಳಿಯ ಪ್ರಕರಣದ ಮೇಲ್ವಿಚಾರಣೆ ನಡೆಸಿದ್ದ ಮಾಜಿ ಡಿಐಜಿ ತಾರೀಕ್, ಹಲವು ಸತ್ಯಗಳನ್ನು ಬಯಲಿಗೆಳೆದಿದ್ದರು. ಅದರಲ್ಲಿ ಅಜ್ಮಲ್ ಕಸಬ್ ಪಾಕ್ ಎನ್ನುವುದು ಪತ್ತೆಯಾಗಿತ್ತು. 
 
ಮಂಬೈ ದಾಳಿಯಲ್ಲಿ ಗಲ್ಲಿಗೇರಿದ ಅಜ್ಮಲ್ ಕಸಬ್, ಪಾಕಿಸ್ತಾನದ ನಾಗರಿಕನಾಗಿದ್ದು ಆತನ ನಿವಾಸ, ಶಾಲೆ ನಿಷೇಧಿತ ಉಗ್ರ ಸಂಘಟನೆಗೆ ಸೇರಿರುವ ಸಂಪೂರ್ಣ ವಿವರಗಳನ್ನು ತಾರೀಕ್ ಬಹಿರಂಗಪಡಿಸಿದ್ದಾರೆ.
 
ಮುಂಬೈ ದಾಳಿಯಲ್ಲಿ ಪಾಲ್ಗೊಂಡಿದ್ದ 10 ಮಂದಿ ಉಗ್ರರು ಲಷ್ಕರ್-ಎ-ತೊಯಿಬಾ ಸಂಘಟನೆಗೆ ಸೇರಿದವರಾಗಿದ್ದು, ಸಿಂಧ ಪ್ರಾಂತ್ಯದ ಥಟ್ಟಾ ಬಳಿ ಉಗ್ರರು ತರಬೇತಿ ಪಡೆದಿದ್ದರು ಎಂದು ತಾರೀಕ್ ಖೋಸಾ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ