ಭಾರತೀಯ ಸೇನೆಯ ಮಾಹಿತಿ ರವಾನಿಸುತ್ತಿದ್ದ ಐಎಸ್‌ಐ ಏಜೆಂಟ್ ಬಂಧನ

ಸೋಮವಾರ, 18 ಆಗಸ್ಟ್ 2014 (19:51 IST)
ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಏಜೆಂಟ್‌ನಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪದ ಮೇಲೆ ಮೇರಠ್‌ನ ದಿಲ್ಲಿ ಗೇಟ್ ನಿವಾಸಿಯಾದ ಆಸಿಫ್ ಅಲಿ ಎನ್ನುವ ವ್ಯಕ್ತಿಯನ್ನು ಉತ್ತರಪ್ರದೇಶದ ವಿಶೇಷ ಪೊಲೀಸ್ ತಂಡ ಬಂಧಿಸಿದೆ.   
 
52 ವರ್ಷದ ಆಸಿಫ್‌‌‌ ಭಾರತೀಯ ಸೇನೆಗೆ ಸಂಬಂಧಿಸಿದ ಮಹತ್ವಪೂರ್ಣ ಮಾಹಿತಿಗಳನ್ನು ಐಎಸ್‌‌ಐಗೆ ರವಾನಿಸುತ್ತಿದ್ದ.  ಪೋಲಿಸರು ಆರೋಪಿಯಿಂದ ಭಾರತೀಯ ಸೇನೆಗೆ ಸಂಬಂಧಿಸಿದ ಕೆಲವು ದಾಖಲೆಗಳು, ಪಾಕಿಸ್ತಾನದ ಡೆಬಿಟ್‌ ಕಾರ್ಡ್‌, ಪಾಕಿಸ್ತಾನದ ಅಲ್‌‌ ಹಬೀಬ್‌ ಬ್ಯಾಂಕ್‌‌ನ ಪಾಸ್‌‌ ಬುಕ್‌‌, ಪಾಕಿಸ್ತಾನದ 6 ಸಿಮ್‌‌ ಕಾರ್ಡ್‌ ಮತ್ತು 3 ಮೊಬೈಲ್‌‌ ಪೋನ್‌‌ಗಳನ್ನು ವಶಪಡಿಸಿಕೊಂಡಿದ್ದಾರೆ. 
 
ಆರೋಪಿ ಐಎಸ್‌ಐ ಸಂಸ್ಥೆಗಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಒಂದು ವಾರಕ್ಕಿಂತ ಮುಂಚೆ ಮಾಹಿತಿ ಲಭಿಸಿದ್ದರಿಂದ ಆತನ ಬಂಧನಕ್ಕಾಗಿ ಜಾಲ ಬೀಸಲಾಗಿತ್ತು. ಸೇನೆಯ ಗುಪ್ತಚರ ಸಂಸ್ಥೆಗೆ ಕೂಡಾ ಆಸಿಫ್ ಚಲನವಲನಗಳ ಬಗ್ಗೆ ಮಾಹಿತಿಯಿದ್ದರಿಂದ. ದಿಲ್ಲಿ ಗೇಟ್ ಪ್ರದೇಶದ ಭಾಟವಾಡ್ ಪ್ರದೇಶದಲ್ಲಿ ಬಂಧಿಸಲಾಯಿತು ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥ ಉಮೇಶ್ ಕುಮಾರ್ ತಿಳಿಸಿದ್ದಾರೆ.    
 
ಆರೋಪಿ ಆಸಿಫ್‌ ಕರಾಚಿ ಮೂಲದ ಯುವತಿ ರುಕ್ಸಾನಾಳೊಂದಿಗೆ ವಿವಾಹವಾಗಿದ್ದರಿಂದ, ಆಕೆಯನ್ನು ಭೇಟಿ ಮಾಡಲು ಪದೇ ಪದೇ ಪಾಕಿಸ್ತಾನಕ್ಕೆ ತೆರಳುತ್ತಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 
ಎರಡು ಮಕ್ಕಳ ತಂದೆಯಾದ ಆಸಿಫ್‌‌ ತನ್ನ ಕುಟುಂಬವನ್ನು ಬೇಟಿಯಾಗುವ ನೆಪದಲ್ಲಿ ಪಾಕಿಸ್ತಾನಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಐಎಸ್‌ಐ ಸಂಪರ್ಕಕ್ಕೆ ಬಂದಿದ್ದನು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಕುಲ್ ಗೋಯಲ್ ಮಾಹಿತಿ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ