ಭಾರತೀಯ ಸೇನೆಯ ಚಿಲ್ಲಿ ಗ್ರೇನೆಡ್‌ಗೆ ಹೆದರಿ ಶರಣಾದ ಪಾಕ್ ಉಗ್ರ ಸಜ್ಜಾದ್

ಗುರುವಾರ, 27 ಆಗಸ್ಟ್ 2015 (21:15 IST)
ಗುಹೆಯೊಳಗೆ ಅಡಗಿದ್ದ  ಉಗ್ರರನ್ನು ಹೊರತರಲು ಭಾರತೀಯ ಸೇನಾಪಡೆಗಳು ಚಿಲ್ಲಿ ಗ್ರೇನೆಡ್‌ಗಳ ಸುರಿಮಳೆಗೈದಿರುವುದು ಕಂಡು ಕಂಗಾಲಾದ ಉಗ್ರ ಸಜ್ಜಾದ್ ತನ್ನನ್ನು ದಯವಿಟ್ಟು ಹತ್ಯೆ ಮಾಡಬೇಡಿ ಎಂದು ಅಂಗಲಾಚಿದ ಘಟನೆ ನಡೆದಿದೆ.
 
ನಿನ್ನೆ ರಾತ್ರಿಯಿಂದಲೇ ಉಗ್ರರು ಗುಹೆಯೊಳಗೆ ಅಡಗಿದ್ದರು ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ. 
 
ಬಂಧಿತ ಉಗ್ರ ಸಜ್ಜಾದ್ ಅಹ್ಮದ್, ತಾನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಜಾಫರ್‌ಘರ್ ನಿವಾಸಿಯಾಗಿದ್ದಾಗಿ ಹೇಳಿಕೆ ನೀಡಿದ್ದಾನೆ.
 
ಪಾಕಿಸ್ತಾನ ಆಕ್ರಮಿತ ಕಾಶ್ಮಿರದಿಂದ ಭಾರತ ಗಡಿಯೊಳಗೆ ನುಸುಳಿದ ಐವರು ಉಗ್ರರು ಗುಹೆಯೊಳಗೆ ಅವಿತುಕೊಂಡು ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ.
 
ಉಗ್ರರಿಗಾಗಿ ಭಾರತೀಯ ಸೇನಾಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದಾಗ ನೈಸರ್ಗಿಕವಾಗಿ ನಿರ್ಮಿತವಾದ ಗುಹೆ ಕಂಡುಬಂದಿದೆ. ಗುಹೆಯ ಹತ್ತಿರ ಹೋಗುತ್ತಿದ್ದಂತೆ ಉಗ್ರರು ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. 
 
ಉಗ್ರರ ದಾಳಿಗೆ ಪ್ರತಿಯಾಗಿ ಸೇನಾಪಡೆಗಳು ಪ್ರತಿದಾಳಿ ನಡೆಸಿವೆ. ಉಗ್ರರನ್ನು ಗುಹೆಯಿಂದ ಹೊರತರಲು ಚಿಲ್ಲಿಗ್ರೇನೆಡ್‌ಗಳ ಸುರಿಮಳೆಗೈದಿದೆ. ಸ್ವಲ್ಪ ಹೊತ್ತಿನ ನಂತರ ಗುಹೆಯೊಳಗೆ ನುಗ್ಗಿದ ಸೇನಾಪಡೆಗಳಿಗೆ, ಉಗ್ರ ಸಜ್ಜಾದ್ ಅಳುತ್ತಾ ಕುಳಿತಿರುವುದು ಕಂಡುಬಂದಿದೆ. 
 
ಆರೋಪಿ ಉಗ್ರ ಸಜ್ಜಾದ್‌ನನ್ನು ಬಂಧಿಸಿದ ಸೇನಾಪಡೆಗಳು ಶ್ರೀನಗರದ ಜಂಟಿ ತನಿಖಾ ಕೇಂದ್ರಕ್ಕೆ ವಿಚಾರಣೆಗಾಗಿ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 

ವೆಬ್ದುನಿಯಾವನ್ನು ಓದಿ