ಪಠಾನ್‌ಕೋಟ್ ಉಗ್ರರ ದಾಳಿ: ಪಾಕಿಸ್ತಾನಕ್ಕೆ ಮತ್ತಷ್ಟು ಸಾಕ್ಷ್ಯಗಳು ಬೇಕಂತೆ..!

ಸೋಮವಾರ, 1 ಫೆಬ್ರವರಿ 2016 (21:51 IST)
ಪಠಾನ್‌ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಯ ಬಗ್ಗೆ ಮತ್ತಷ್ಟು ಸಾಕ್ಷ್ಯಗಳನ್ನು ಒದಗಿಸುವಂತೆ ಪಾಕಿಸ್ತಾನ ಕೋರಿದೆ.
 
ಭಾರತ ನೀಡಿದ ಸಾಕ್ಷ್ಯಗಳು ಸಾಲುತ್ತಿಲ್ಲ. ಆದ್ದರಿಂದ, ತನಿಖೆ ಮುಂದುವರಿಯಲು ಮತ್ತಷ್ಟು ಸಾಕ್ಷ್ಯಾಧಾರಗಳನ್ನು ನೀಡುವಂತೆ ಪಾಕಿಸ್ತಾನ ಸರಕಾರ ಭಾರತ ಸರಕಾರಕ್ಕೆ ಮನವಿ ಮಾಡಿದೆ.
 
ಪಠಾನ್‌ಕೋಟ್ ದಾಳಿಯ ತನಿಖಾ ಪ್ರಗತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು ಎಂದು ಪ್ರಧಾನಿ ನವಾಜ್ ಷರೀಫ್ ಹೇಳಿಕೆ ನೀಡಿದ ಮಾರನೇ ದಿನವೇ ಪಾಕ್ ಮತ್ತಷ್ಟು ಸಾಕ್ಷ್ಯಗಳಿಗಾಗಿ ಬೇಡಿಕೆ ಸಲ್ಲಿಸಿದೆ.
 
ಪಠಾನ್‌ಕೋಟ್ ದಾಳಿಯ ಬಗ್ಗೆ ಪಾಕಿಸ್ತಾನ ಸರಕಾರದ ಆರು ಸದಸ್ಯರ ತಂಡ ತನಿಖೆ ನಡೆಸುತ್ತಿದೆ. ಉಗ್ರರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದ್ದಲ್ಲಿ ರವಾನಿಸಿ. ತನಿಖೆ ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದೆ.
 
ಭಾರತ ಸರಕಾರ ಪಾಕಿಸ್ತಾನಕ್ಕೆ ನೀಡಿದ ಉಗ್ರರ ಐದು ಮೊಬೈಲ್ ಸಂಖ್ಯೆಗಳ ಬಗ್ಗೆ ತನಿಖೆ ಪೂರ್ಣಗೊಳಿಸಿದೆ.ಆದರೆ, ಮೊಬೈಲ್ ಸಂಖ್ಯೆಗಳು ನೋಂದಾಯಿತವಾಗಿಲ್ಲವಾದ್ದರಿಂದ ತನಿಖೆಗೆ ಪೂರಕವಾಗಿಲ್ಲ ಎಂದು  ತನಿಖಾಧಿಕಾರಿಗಳು ತಿಳಿಸಿದ್ದಾರೆ.
 
ತನಿಖಾ ತಂಡಕ್ಕೆ ಹೆಚ್ಚಿನ ವಿವರಗಳನ್ನು ನೀಡಿದಲ್ಲಿ ಸಹಾಯಕವಾಗುತ್ತದೆ ಎಂದು ಪಾಕ್ ಸರಕಾರ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ. 
 
ಪಠಾನ್‌ಕೋಟಿ ದಾಳಿಯಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರರ ಕೈವಾಡವಿದೆಯೇ ಎನ್ನುವ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ತನಿಖಾಧಿಕಾರಿ, ಮೊದಲು ಹೆಚ್ಚಿನ ಸಾಕ್ಷ್ಯಗಳನ್ನು ಭಾರತ ನೀಡಲಿ ಎಂದರು.
 
ಪ್ರಧಾನಮಂತ್ರಿ ನವಾಜ್ ಷರೀಫ್, ಪಂಜಾಬ್ ಭಯೋತ್ಪಾದಕ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ನೇತೃತ್ವದಲ್ಲಿ ಆರು ಸದಸ್ಯರ ತಂಡವನ್ನು ರಚಿಸಿದ್ದು, ಪಠಾನ್‌ಕೋಟ್ ದಾಳಿಯಲ್ಲಿ ಪಾಲ್ಗೊಂಡ ಉಗ್ರರ ಬಗ್ಗೆ ತನಿಖೆ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ