ಹುಡುಗಿಯರಿಗೆ ಮೊಬೈಲ್ ಬ್ಯಾನ್ ಮಾಡಿದ ಪಂಚಾಯತ್

ಶನಿವಾರ, 20 ಫೆಬ್ರವರಿ 2016 (14:54 IST)
ಆಗ್ರಾದ ಅಲಿಗಢ್ ಗ್ರಾಮ ಪಂಚಾಯತ್ 18 ವರ್ಷದ ಒಳಗಿನ ಹುಡುಗಿಯರಿಗೆ ಮೊಬೈಲ್ ಬಳಕೆಯನ್ನು ನಿಷೇಧಿಸಿದೆ. ಇದಕ್ಕೆ ಮೊಬೈಲ್ ಫೋನ್‌ಗಳು ಹುಡುಗಿಯರನ್ನು ಹಾಳು ಮಾಡುತ್ತವೆ ಎಂಬ ಕಾರಣವನ್ನದು ನೀಡಿದೆ. ಈ ನಿಯಮವನ್ನು ಮೀರಿದ ಕುಟುಂಬದ ಸದಸ್ಯರು ಗ್ರಾಮದ ರಸ್ತೆಗಳನ್ನು ಗುಡಿಸುವ ಶಿಕ್ಷೆಗೆ ಒಳಪಡಿಸಲಾಗುತ್ತದೆ. 
 
ದೇಶದ ಪ್ರತಿಯೊಬ್ಬ ನಾಗರಿಕನನ್ನು ಸ್ಮಾರ್ಟ್‌ಫೋನ್ ಮೂಲಕ ಸಂಪರ್ಕಿಸುವ ಪ್ರಧಾನಿ ಮೋದಿ ಮಹಾತ್ವಾಕಾಂಕ್ಷೆಯ ಯೋಜನೆಯಾದ ಡಿಜಿಟಲ್ ಇಂಡಿಯಾ ಪ್ರಾರಂಭದ ಹಂತದಲ್ಲಿರುವಾಗ, ಅದಕ್ಕೆ ವ್ಯಂಗ್ಯವಾಗಿ ಗೊಂಡಾ ಬ್ಲಾಕ್ ಅಡಿ ಬರುವ ಬಸೌಲಿ ಗ್ರಾಮಪಂಚಾಯತ್ ತನ್ನ ಈ ನಿರ್ಧಾರವನ್ನು ಘೋಷಿಸಿದೆ. 
 
ಗ್ರಾಮದಲ್ಲಿರುವ ಅವಿವಾಹಿತ ಯುವತಿಯರು ಮೊಬೈಲ್ ಫೋನ್, ಸಾಮಾಜಿಕ ಮಾಧ್ಯಮಗಳನ್ನು ಬಳಸಬಾರದೆಂದು ಆಗ್ರಾದಿಂದ 80 ಕೀಲೋಮೀಟರ್ ದೂರದಲ್ಲಿರುವ ಬಸೌಲಿ ಗ್ರಾಮದ ಖಾಪ್ ಪಂಚಾಯತ್ ಹೇಳಿದೆ. ಒಂದು ವೇಳೆ ಸಿಕ್ಕಿ ಬಿದ್ದರೆ ಅವರ ಪೋಷಕರು ಗ್ರಾಮದಲ್ಲಿ 500 ಮೀಟರ್ ರಸ್ತೆಯನ್ನು 5 ದಿನಗಳ ಕಾಲ ಗುಡಿಸಬೇಕು ಅಥವಾ 1,000 ರೂಪಾಯಿಗಳವರೆಗೆ ದಂಡವನ್ನು ನೀಡಬೇಕು ಎಂದು ಪಂಚಾಯತ್ ತಾಕೀತು ಮಾಡಿದೆ. 

ಹದಿಹರೆಯದಲ್ಲಿ ಮೊಬೈಲ್ ಬಳಸುವ ಹುಡುಗಿಯರು ಕೆಟ್ಟು ಹೋಗುತ್ತಾರೆ ಮತ್ತು ಹುಡುಗರ ಜತೆ ಸಂಬಂಧವನ್ನು ಬೆಳೆಸುತ್ತಾರೆ. ಇದು ಅವರ ವಿರುದ್ಧ ಅಪರಾಧಕ್ಕೂ ಕಾರಣವಾಗುತ್ತದೆ. ನಮ್ಮ ಕಾಲದಲ್ಲಿ ಈ ರೀತಿಯ ಸಮಸ್ಯೆಗಳಿರಲಿಲ್ಲ. ತಂತ್ರಜ್ಞಾನ ಅವರನ್ನು ಕೆಡಿಸಿ ಬಿಟ್ಟಿದೆ, ನಾವದನ್ನು ನಿಗ್ರಹಿಸುವ ಅನಿವಾರ್ಯತೆ ಇದೆ, ಎಂದು ಪಂಚಾಯತ್ ಸಂಚಾಲಕ ರಾಮವೀರ್ ಸಿಂಗ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ