ಕೇಂದ್ರ ಸಚಿವರಿಗಾಗಿ ಮೂವರು ಪ್ರಯಾಣಿಕರನ್ನು ಕೆಳಗಿಳಿಸಿದ ಏರ್ ಇಂಡಿಯಾ

ಗುರುವಾರ, 2 ಜುಲೈ 2015 (15:56 IST)
ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೆ ಸೀಟು ಕಲ್ಪಿಸಿ ಕೊಡುವುದಕ್ಕಾಗಿ ಏರ್ ಇಂಡಿಯಾ ಸಿಬ್ಬಂದಿ ಮೂವರು ಪ್ರಯಾಣಿಕರನ್ನು ಕೆಳಗಿಳಿಸಿದ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ. ಜಮ್ಮು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಈ ಸುದ್ದಿಯನ್ನು ಸ್ಪಷ್ಟಪಡಿಸಿದ್ದಾರೆ.
 
ಕಿರಣ್ ರಿಜಿಜು ಹಾಗೂ ನಿರ್ಮಲ್ ಸಿಂಗ್ ಜೂನ್ 24 ರಂದು ಲೇಹ್‌ನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಈ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಅವರಿಗೆ ಸೀಟ್ ಸಿಕ್ಕಿರಲಿಲ್ಲ. ಹೀಗಾಗಿ ವಿಮಾನದ ಸಿಬ್ಬಂದಿಗಳು ಮಗು ಸೇರಿ ಮೂವರನ್ನು ಬಲವಂತವಾಗಿ ಕೆಳಗಿಳಿಸಿ ಸಚಿವರ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 
 
ಆದರೆ ಸಿಂಗ್, ರಿಜಿಜು ಅವರನ್ನು ಸಮರ್ಥಿಸಿಕೊಂಡಿದ್ದು, ಸಚಿವರಿಗೆ ಝಡ್ ಪ್ಲಸ್ ಭದ್ರತೆ ಇದ್ದು, ಅವರಿಗೆ ಸೂಕ್ತ ರಕ್ಷಣೆ ಒದಗಿಸುವುದಕ್ಕಾಗಿ ಕೆಲವು ಪ್ರಯಾಣಿಕರನ್ನು ಕೆಳಗಿಳಿಸಬೇಕಾಯಿತು ಎಂದಿದ್ದಾರೆ. 
 
ರಿಜಿಜು ಅವರಿಗೆ ಭದ್ರತೆ ನೀಡಬೇಕಾಗಿತ್ತು. ಹೀಗಾಗಿ ಕಾನೂನಿನ ಅನ್ವಯ ಏರ್ ಇಂಡಿಯಾ ಈ ಕ್ರಮವನ್ನು ಪಡೆದುಕೊಂಡಿದೆ ಎಂದು ಸಿಂಗ್ ಹೇಳಿದ್ದಾರೆ. 
 
ಅವರ ಪ್ರಕಾರ ವಿಮಾನದಿಂದ ಕೆಳಗಿಳಿಯುವಂತೆ ಪ್ರಯಾಣಿಕರಿಗೆ ಬಲವಂತ ಮಾಡಲಿಲ್ಲ. ರಿಜಿಜು ತುರ್ತು ಕಾರ್ಯ ನಿಮಿತ್ತ ಹೋಗಬೇಕು ಎಂದು ಮನವಿ ಮಾಡಿಕೊಂಡಾಗ ಪ್ರಯಾಣಿಕರೇ ಸೀಟು ಬಿಟ್ಟುಕೊಡಲು ಒಪ್ಪಿದರು. 
 
ಏರ್ ಇಂಡಿಯಾ ಅಧಿಕಾರಿಗಳ ಹಾಗೂ ಸಿಬ್ಬಂದಿಯ ನಡೆ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
 
ಆದರೆ ತಮಗೆ ಸೀಟು ಒದಗಿಸುವ ಕಾರಣಕ್ಕೆ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿದ ಬಗ್ಗೆ ತಮಗೆ ತಿಳಿದಿಲ್ಲವೆಂದು ಸಚಿವರು ಹೇಳಿದ್ದಾರೆ. ಹೀಗೆ ನಡೆದಿದ್ದು ಹೌದಾದರೆ ಅದು ಸಂಪೂರ್ಣವಾಗಿ ತಪ್ಪು ಮತ್ತು ಸ್ವೀಕಾರಾರ್ಹವಲ್ಲ ಎಂದಿದ್ದಾರೆ ರಿಜಿಜು. 

ವೆಬ್ದುನಿಯಾವನ್ನು ಓದಿ