ಘರ್ಷಣೆ, ಹತ್ಯೆ ಪ್ರಕರಣ: ಬಾಬಾ ರಾಮದೇವ್ ಸಹೋದರನ ಬಂಧನ

ಗುರುವಾರ, 28 ಮೇ 2015 (12:37 IST)
ಯೋಗ ಗುರು ಬಾಬಾ ರಾಮ್‌ದೇವ್‌ಗೆ ಸೇರಿದ ಪತಂಜಲಿ ಫ‌ುಡ್‌ & ಹರ್ಬಲ್‌ ಪಾರ್ಕ್‌ನಲ್ಲಿ ಬುಧವಾರ ನಡೆದ ಘರ್ಷಣೆ ಮತ್ತು ಒಬ್ಬ ವ್ಯಕ್ತಿಯ ಹತ್ಯೆಗೆ ಸಂಬಂಧಿಸಿದಂತೆ ರಾಮದೇವ್ ಸಹೋದರ ರಾಮ್ ಭರತ್‌ನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಮೇಲೆ ಐಪಿಸಿ ವಿಭಾಗ 302 ಮತ್ತು 307ರ ಅಡಿಯಲ್ಲಿ  ಪ್ರಕರಣ ದಾಖಲಾಗಿದೆ.

ಇತರ 40 ಜನರ ಮೇಲೂ ಸಹ ಪೊಲೀಸರು ಕೇಸ್  ದಾಖಲಿಸಿದ್ದಾರೆ. 
 
ಟ್ರಕ್‌ ಯೂನಿಯನ್‌ ಸದಸ್ಯರು ಮತ್ತು ಫ‌ುಡ್‌ ಪಾರ್ಕ್‌ನ ಭದ್ರತಾ ಸಿಬ್ಬಂದಿಗಳ ನಡುವೆ ಬುಧವಾರ ಘರ್ಷಣೆ ನಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. 
 
ಟ್ರಕ್‌ಗಳನ್ನು ಬಾಡಿಗೆಗೆ ನೀಡುವ ವಿಚಾರದಲ್ಲಿ ಪ್ರಾರಂಭವಾದ ಜಗಳ ಘರ್ಷಣೆಗೆ ತಿರುಗಿ ಟ್ರಕ್‌ ಮಾಲೀಕ ದಲ್ಜೀತ್‌ ಸಿಂಗ್‌ ಎಂಬಾತ ಸಾವನ್ನಪ್ಪಿದ್ದ. ಘಟನೆಗೆ ಸಂಬಂಧಿಸಿದಂತೆ ಪಥ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
 
ಸ್ಥಳೀಯ ಟ್ರಕ್‌ ಗಳಿಗೆ ಅವಕಾಶ ನೀಡದೆ ಹೊರಗಿನವರಿಗೆ ಕೆಲಸ ನೀಡುತ್ತಿದ್ದೀರಿ ಎಂದು ಟ್ರಕ್‌ ಮಾಲೀಕರು ಪತಂಜಲಿ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು ಎಂದು ಹೇಳಲಾಗಿದೆ. 
 
ವರದಿಗಳ ಪ್ರಕಾರ ಸಹೋದರನನ್ನು ರಕ್ಷಿಸಲು ರಾಮದೇವ್ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಆದರೆ ಸಫಲರಾಗಲಿಲ್ಲ. 

ವೆಬ್ದುನಿಯಾವನ್ನು ಓದಿ