ಪಾಕಿಸ್ತಾನಕ್ಕೆ ಶರಣಾದ ಪ್ರಧಾನಿ ನರೇಂದ್ರ ಮೋದಿ : ಅರವಿಂದ್ ಕೇಜ್ರಿವಾಲ್

ಸೋಮವಾರ, 28 ಮಾರ್ಚ್ 2016 (19:40 IST)
ಪಠಾನ್‌ಕೋಟ್ ವಾಯುನೆಲೆಯಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ತನಿಖೆ ನಡೆಸಲು ಪಾಕ್ ತಂಡಕ್ಕೆ ಅನುಮತಿ ನೀಡಿದ ಪ್ರಧಾನಿ ಮೋದಿ, ಪಾಕಿಸ್ತಾನಕ್ಕೆ ಸಂಪೂರ್ಣವಾಗಿ ಶರಣಾಗಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
 
ಪಾಕಿಸ್ತಾನವೇ ಭಾರತದ ವಿರುದ್ಧ ನಿರಂತರವಾಗಿ ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವುದರಿಂದ ಪಾಕಿಸ್ತಾನದ ತನಿಖಾಧಿಕಾರಿಗಳು , ಭದ್ರತಾ ಅಧಿಕಾರಿಗಳಿಗೆ ಪಠಾನ್‌ಕೋಟ್ ದಾಳಿಯ ಬಗ್ಗೆ ತನಿಖೆ ನಡೆಸಲು ಮೋದಿ ಹೇಗೆ ಅನುಮತಿ ನೀಡಿದರು ಎಂದು ಪ್ರಶ್ನಿಸಿದ್ದಾರೆ. 
 
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಭಾರತದ ಮೇಲಿನ ಉಗ್ರರ ದಾಳಿಗಳಿಗೆ ನೆರವು ನೀಡುತ್ತದೆ ಎಂದು ನಾವು ಹೇಳುತ್ತೇವೆ. ಇದೊಂದು ಪಾಕ್ ಪ್ರಾಯೋಜಿತ ಭಯೋತ್ಪಾದನೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ. ಇದೀಗ ಪಾಕ್ ಅಧಿಕಾರಿಗಳನ್ನು ತನಿಖೆಗಾಗಿ ಭಾರತಕ್ಕೆ ಕರೆಸಿರುವುದು ನೋಡಿದಲ್ಲಿ ಪ್ರಧಾನಿ ಮೋದಿ ಪಾಕ್‌ಗೆ ಶರಣಾಗಿದ್ದಾರೆ ಎಂದು ಭಾವಿಸಬೇಕಾಗುವುದಾಗಿ ಕಳವಳ ವ್ಯಕ್ತಪಡಿಸಿದ್ದಾರೆ.
 
ಜನೆವರಿ 2 ರಂದು ಪಾಕಿಸ್ತಾನದ ಉಗ್ರರು ನಡೆಸಿದ ದಾಳಿಯಲ್ಲಿ ಏಳು ಭದ್ರತಾ ಪಡೆಗಳ ಸದಸ್ಯರು ಹುತಾತ್ಮರಾಗಿದ್ದ ಘಟನೆಯ ಬಗ್ಗೆ ತನಿಖೆ ನಡೆಸಲು ಪಾಕ್ ತಂಡ ಭಾರತಕ್ಕೆ ಭೇಟಿ ನೀಡಿದೆ.   

ವೆಬ್ದುನಿಯಾವನ್ನು ಓದಿ