ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದ್ರೆ, ಮೂತ್ರ ಮಾಡಿದ್ರೆ 500 ರೂ. ದಂಡ

ಬುಧವಾರ, 20 ಆಗಸ್ಟ್ 2014 (16:34 IST)
ರಸ್ತೆಯ ಬದಿಯಲ್ಲಿ ಕಸಹಾಕುವುದು, ಮೂತ್ರ ಮಾಡುವವರಿಗೆ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇನ್ಮುಂದೆ ರಸ್ತೆ ಬದಿಯಲ್ಲಿ ಕಸ ಹಾಕುವವರಿಗೆ, ಮೂತ್ರ ಮಾಡುವವರಿಗೆ  100 ರೂಪಾಯಿಗಳಿಂದ 500 ರೂಪಾಯಿಗಳವರೆಗೆ ದಂಡ ವಿಧಿಸಲು ನಿರ್ಧರಿಸಿದೆ.   
 
ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಪೋರೇಶನ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದ್ದು, ಒಂದು ವೇಳೆ ಯಾರಾದರೂ ರಸ್ತೆ ಬದಿಯಲ್ಲಿ ಕಸ ಎಸೆಯುವುದು, ಮೂತ್ರ ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ದಂಡ ವಿಧಿಸಲಾಗುವುದು. ದಂಡದ ಹಣವನ್ನು ಕಾರ್ಪೋರೇಶನ್‌ನಲ್ಲಿ ಜಮಾ ಮಾಡಲಾಗುವುದು ಎಂದು ಮೇಯರ್ ಯೋಗೇಂದರ್ ಚಾಂಡೋಲಿಯಾ ತಿಳಿಸಿದ್ದಾರೆ.   
 
ಮುಂಬರುವ ಹಬ್ಬಗಳ ಸಂದರ್ಭದಲ್ಲಿ ನಗರವನ್ನು ಸ್ವಚ್ಚಗೊಳಿಸುವ ಉದ್ದೇಶದಿಂದ ದೆಹಲಿ ಕಾರ್ಪೋರೇಶನ್ 100 ದಿನಗಳ ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಂಡಿದೆ.
 
ಒಂದು ವೇಳೆ ಸಾಕಿದ ನಾಯಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಕ್ಕಸ ಮಾಡಿದಲ್ಲಿ ನಾಯಿಗಳ ಮಾಲೀಕರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ. ದೆಹಲಿ ಕಾರ್ಪೋರೇಶನ್‌ ಈ ಹಿಂದೆ ಅನೇಕ ಬಾರಿ ಇಂತಹ ಘೋಷಣೆಗಳನ್ನು ಮಾಡಿ ವೈಫಲ್ಯತೆಯನ್ನು ಅನುಭವಿಸಿತ್ತು.    
 
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಮತ್ತು ರಸ್ತೆ ಬದಿಯಲ್ಲಿ ಮೂತ್ರ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸ್ವಚ್ಚತಾ ಸಿಬ್ಬಂದಿಗೆ ಆದೇಶಿಸಲಾಗಿದೆ ಎಂದು ಮೇಯರ್ ಚಾಂಡೋಲಿಯಾ ತಿಳಿಸಿದ್ದಾರೆ.  
 
 
 

ವೆಬ್ದುನಿಯಾವನ್ನು ಓದಿ