ಪೇಯಿಂಗ್ ಗೆಸ್ಟ್‌ರಾಗಿರುವವರು ಹೆಚ್ಚಿನ ಬಾಡಿಗೆ ಪಾವತಿಸಲು ಸಿದ್ದರಾಗಿ

ಗುರುವಾರ, 31 ಜುಲೈ 2014 (15:31 IST)
ನಗರದಲ್ಲಿರುವ ಪೇಯಿಂಗ್ ಗೆಸ್ಟ್‌ಗಳು (ಪಿಜಿ) ಇನ್ನು ಮುಂದೆ ವಸತಿಯೇತರ ವರ್ಗದ ತೆರಿಗೆ ಪಾವತಿಸಬೇಕು. 12 ಹಾಸಿಗೆಗಿಂತ ಹೆಚ್ಚಿನ ಸಾಮರ್ಥ್ಯದ ಪಿಜಿ ಕಟ್ಟಡಗಳು ಮುಂದಿನ ಆರ್ಥಿಕ ವರ್ಷದಿಂದ ಆಸ್ತಿ ತೆರಿಗೆಯನ್ನು ವಸತಿಯೇತರ ವರ್ಗದಲ್ಲೇ ಪಾವತಿಸಬೇಕು.
 
ರಾಜ್ಯ ಸರ್ಕಾರ ಅಧಿಸೂಚನೆ ಮೂಲಕ ಹೊರಡಿಸಿದ್ದ ಆದೇಶವನ್ನು ಜಾರಿಗೆ ತರಲು ಬಿಬಿಎಂಪಿ ಕೌನ್ಸಿಲ್ ಸಭೆ ಬುಧವಾರ ಸಮ್ಮತಿಸಿದೆ. ಸ್ವಂತ ಹಾಗೂ ಬಾಡಿಗೆ ಕಟ್ಟಡಗಳಿಗೆ ಪ್ರತ್ಯೇಕವಾದ ಆಸ್ತಿ ತೆರಿಗೆ ದರ ನಿಗದಿಪಡಿಸಲಾಗಿದೆ.
 
ವಸತಿಯೇತರ ಆಸ್ತಿ ತೆರಿಗೆ ವಿಧಿಸಲು ಎ, ಬಿ, ಸಿ, ಡಿ, ಇ, ಎಫ್ ಎಂಬ ವಲಯಗಳನ್ನು ಗುರುತಿಸಲಾಗಿದೆ. ಈ ವೇಳೆ ಮಾತನಾಡಿದ ಬಿಜೆಪಿಯ ಪದ್ಮನಾಭರೆಡ್ಡಿ, ಪಾಲಿಕೆಗೆ ಆದಾಯದ ಅಗತ್ಯವಿದೆ. ಆದರೆ ಜನರ ಆರ್ಥಿಕ ಸ್ಥಿತಿ ಪರಿಗಣಿಸಿ ತೆರಿಗೆ ವಿಧಿಸಬೇಕು. ಕೆಲವು ಪಿಜಿಗಳು ಕಡಿಮೆ ಸಂಖ್ಯೆಯ ನಿವಾಸಿಗಳನ್ನು ಹೊಂದಿರುತ್ತವೆ. ಮತ್ತೆ ಕೆಲವು ಪಿಜಿಗಳಲ್ಲಿ 8 ಸಾವಿರಕ್ಕೂ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ. ಸೆಂಟ್ರಲ್ ಎಸಿ ಇರುವ ಐಟಿ ಪಾರ್ಕ್‌ಗಳಿಗೆ ಚದರ ಅಡಿಗೆ 10-20 ವಿಧಿಸುವಾಗ ಪಿಜಿ ನಡೆಸುವ ಬಡವರಿಗೆ ಅಧಿಕ ತೆರಿಗೆ ವಿಧಿಸಬಾರದು. ಕಲ್ಯಾಣ ಮಂಟಪಗಳಿಗೂ ಕಡಿಮೆ ತೆರಿಗೆಯಿದೆ. ಪಿಜಿಗಳ ವಹಿವಾಟು ಆಧರಿಸಿ ತೆರಿಗೆ ವಿಧಿಸಬೇಕು ಎಂದು ಒತ್ತಾಯಿಸಿದರು.
 
ಎನ್.ಆರ್.ರಮೇಶ್ ಮಾತನಾಡಿ, ದಕ್ಷಿಣ ವಲಯದಲ್ಲಿ ಮಾತ್ರ ಸಮೀಕ್ಷೆ ನಡೆಸಿದ ಅಧಿಕಾರಿಗಳು ಒಟ್ಟು 13,040 ಯೂನಿಟ್‌ಗಳಿರುವ 898 ಪಿಜಿ ಪತ್ತೆಹಚ್ಚಿದ್ದಾರೆ. 7 ವಲಯಗಳಲ್ಲಿ ಎಷ್ಟು ಪಿಜಿ ಇದೆ ಎಂಬ ಮಾಹಿತಿಯಿಲ್ಲ. ಮುಂದಿನ ತಿಂಗಳೊಳಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
 
ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ ಮಾತನಾಡಿ, ಮುಂದಿನ ವರ್ಷದಿಂದ ತೆರಿಗೆ ವಿಧಿಸಲು ನಿರ್ಧರಿಸಿರುವುದು ಸರಿಯಲ್ಲ. ಈ ವರ್ಷದಿಂದಲೇ ತೆರಿಗೆ ವಿಧಿಸಿದರೆ ಪಾಲಿಕೆಗೆ ಆದಾಯ ಬರುತ್ತದೆ ಎಂದರು.

ವೆಬ್ದುನಿಯಾವನ್ನು ಓದಿ