ಶಾಂತಿ, ಅಭಿವೃದ್ಧಿ ಸಹಕಾರಕ್ಕೆ ವಿಶ್ವವೇ ಒಂದಾಗಲಿ: ನರೇಂದ್ರ ಮೋದಿ

ಶುಕ್ರವಾರ, 10 ಏಪ್ರಿಲ್ 2015 (19:54 IST)
ಜಗತ್ತಿನ ಶಾಂತಿ ಮತ್ತು ಅಭಿವೃದ್ಧಿಗೆ ಪರಸ್ಪರ ಕೈ ಜೋಡಿಸಬೇಕಾಗಿದೆ. ಸಂಘಟನೆಯ 70 ನೇ ವರ್ಷಾಚರಣೆ ಸಂದರ್ಭ ಪ್ರತಿಯೊಬ್ಬರು ಈ ಬಗ್ಗೆ ಚಿಂತಿಸಬೇಕಾಗಿದೆ  ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.

ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಇಂದು ಯುನೆಸ್ಕೋ ಮುಖ್ಯ ಕಚೇರಿಯಲ್ಲಿ ಯುನೆಸ್ಕೋ ಸಿಬ್ಬಂದಿ, ಖಾಸಗಿ ವಲಯದ ಪ್ರತಿನಿಧಿಗಳು ಸೇರಿದಂತೆ ಹಲವು ಗಣ್ಯರನ್ನು ಉದ್ದೇಶಿಸಿ ಮಾತನಾಡಿದರು.

ವಿಶ್ವಸಂಸ್ಥೆಯ ರೀತಿ ಬೇರೆ ಯಾವ ಸಂಸ್ಥೆಯೂ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ವಿಶ್ವಸಂಸ್ಥೆಯ ಮೂಲಕವೇ ನಾವು ಜಗತ್ತಿನ ಉಜ್ವಲ ಭವಿಷ್ಯವನ್ನು ಖಾತರಿಪಡಿಸಿಕೊಳ್ಳಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

ವಿಶ್ವಶಾಂತಿಗಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಎಲ್ಲಾ ಸಂಪತ್ತುಗಳಿಗಿಂತಲೂ ವಿದ್ಯೆ ದೊಡ್ಡ ಸಂಪತ್ತು. ಭಾರತದಲ್ಲಿ ವಿಜ್ಞಾನ ಮತ್ತು ಶಿಕ್ಷಣಕ್ಕೆ ಯುನೆಸ್ಕೋ ತನ್ನ ಬೆಂಬಲ ಮುಂದುವರಿಸಿರುವುದಕ್ಕೆ ನಾನು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ವಿಶ್ವಸಂಸ್ಥೆ ಇಡೀ ಜಗತ್ತನ್ನು ಒಂದು ಮಾಡಿದೆ. ಆದರೆ ಶಾಂತಿಯುತ ಜಗತ್ತು ನಮ್ಮೆಲ್ಲರ ಏಕೈಕ ಗುರಿಯಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ