ಕಪ್ಪುಹಣ ವಂಚನೆ; ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಅಣ್ಣಾ ಹಜಾರೆ

ಗುರುವಾರ, 29 ಜನವರಿ 2015 (18:06 IST)
ಕಪ್ಪು ಹಣವನ್ನು ಮರಳಿ ತರಲು ವಿಫಲವಾಗಿರುವ ಬಿಜೆಪಿ ಸರಕಾರದ ವಿರುದ್ಧ  ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಭ್ರಷ್ಟಾಚಾರ ವಿರೋಧಿ ಚಳುವಳಿಗಾರ ಅಣ್ಣಾ ಹಜಾರೆ ಕಿಡಿಕಾರಿದ್ದಾರೆ. ಜನರಿಗೆ ವಂಚನೆ ಮಾಡಿರುವ ಮೋದಿ ಸರಕಾರಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅಣ್ಣಾ ಎಚ್ಚರಿಕೆ ನೀಡಿದ್ದಾರೆ. 
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಪ್ಪುಹಣವನ್ನು ಅಧಿಕಾರಕ್ಕೇರಿದ 100 ದಿನಗಳಲ್ಲಿ ಮರಳಿ ತರುತ್ತೇವೆ. ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂಪಾಯಿಗಳನ್ನು ಠೇವಣಿ ಇಡುವುದಾಗಿ ಬಿಜೆಪಿ ಜನರಿಗೆ ವಾಗ್ದಾನ ಮಾಡಿತ್ತು ಆದರೆ 15 ರೂಪಾಯಿಗಳು ಕೂಡ ಮರಳಿ ಬರಲಿಲ್ಲ ಎಂದು ಅಣ್ಣಾ ಆರೋಪಿಸಿದ್ದಾರೆ. 
 
ಸುದ್ದಿವಾಹಿನಿ ಒಂದಕ್ಕೆ ಸಂದರ್ಶನ ನೀಡುತ್ತಿದ್ದ ಅಣ್ಣಾ ತಮಗೆ ಸುಳ್ಳು ಭರವಸೆಗಳನ್ನು ನೀಡಲಾಗಿತ್ತು ಎಂದು ಜನರಿಗೆ ಈಗ ಅರಿವಾಗಿದೆ. ಕಾಂಗ್ರೆಸ್‌ಗೆ ಪಾಠ ಕಲಿಸಿದ ರೀತಿಯಲ್ಲಿಯೇ ಬಿಜೆಪಿಗೆ ನೇತೃತ್ವದ ಸರಕಾರಕ್ಕೆ ಕೂಡ ಅವರು ತಕ್ಕ ಪಾಠ ಕಲಿಸಲಿದ್ದಾರೆ. ಭೃಷ್ಟಾಚಾರದ ವಿರುದ್ಧ 2011ರಲ್ಲಿ ಚಳುವಳಿ ನಡೆಸಿದ ನಂತರ  ಜನಸಾಮಾನ್ಯರು ಎಚ್ಚೆತ್ತುಕೊಂಡಿದ್ದಾರೆ ಎಂದು ಹೇಳಿದ್ದಾರೆ. 
 
ತಮ್ಮ ಮಾಜಿ ಅನುಚರರಾದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮತ್ತು ಬಿಜೆಪಿಯ ಕಿರಣ್ ಬೇಡಿ ನಡುವೆ ನಡೆಯುತ್ತಿರುವ ರಾಜಕೀಯ ಜಿದ್ದಾಜಿದ್ದಿನ ಕುರಿತು ಪ್ರತಿಕ್ರಿಯಿಸಲು 77 ವರ್ಷದ ಗಾಂಧಿವಾದಿ ನಿರಾಕರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ