ಪಾರ್ಕ್‌ಗಳಲ್ಲಿ ನಾಯಿಗಳು ಮಲವಿಸರ್ಜನೆ ಮಾಡಿದ್ರೆ ನಾಯಿ ಮಾಲೀಕರಿಗೆ 21 ಸಾವಿರ ದಂಡ

ಬುಧವಾರ, 30 ಜುಲೈ 2014 (18:56 IST)
ಕಾಲೋನಿಯ ಪಾರ್ಕ್‌ಗಳಲ್ಲಿ ಸಾಕುಪ್ರಾಣಿಗಳಿಂದ ಮಲವಿಸರ್ಜನೆ ಮಾಡಿಸಿದರೆ, ಅಂತಹ ಮಾಲೀಕರ ಮೇಲೆ 21,000 ದಂಡ ವಿಧಿಸಲು ನೋಯ್ಡಾದ ಬೀಟಾ ಸೆಕ್ಟರ್- 1 ನಾಗರಿಕ ಹಿತರಕ್ಷಣಾ ಸಂಘ (RWA) ನಿರ್ಧರಿಸಿದೆ.

ತಮ್ಮ ಸಾಕುಪ್ರಾಣಿಗಳನ್ನು ಸುತ್ತಾಡಿಸಲು ಕರೆದುಕೊಂಡು ಬಂದು ಸೂಕ್ಷ್ಮವಲ್ಲದ ವರ್ತನೆ ತೋರುತ್ತಿರುವ  ನಿವಾಸಿಗಳ ಹೊಣೆಗೇಡಿತನ ಮತ್ತು ಈ ಸಮಸ್ಯೆ ಕಂಡು ಕಾಣದಂತೆ ನಡೆದುಕೊಳ್ಳುತ್ತಿರುವ ಗ್ರೇಟರ್ ನೋಯ್ಡಾ ಪ್ರಾಧಿಕಾರದ ಕುರುಡುತನ  ಈ  ನಿರ್ಧಾರಕ್ಕೆ ಬರಲು ಕಾರಣವಾಯಿತು ಎಂದು ನಾಗರಿಕ ಹಿತರಕ್ಷಣಾ ಸಂಘದ ಸದಸ್ಯರು ತಿಳಿಸಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ಸಂಘದ  ಪ್ರಧಾನ ಕಾರ್ಯದರ್ಶಿ ಹರಿಂಧರ್ ಭಾತಿ, ಈ ಸೆಕ್ಟರ್‌ನಲ್ಲಿ 1,800 ಮನೆಗಳಿದ್ದು,  ಹೆಚ್ಚಿನವರು ಒಂದಕ್ಕಿಂತ ಹೆಚ್ಚು ನಾಯಿಗಳನ್ನು ಹೊಂದಿದ್ದಾರೆ. ನಮ್ಮ ಇಲಾಖೆಯಲ್ಲಿರುವ 8 ಪಾರ್ಕ್‌ಗಳನ್ನು ಸ್ವಚ್ಛವಾಗಿಡುವಲ್ಲಿ ಸಹಕರಿಸುವಂತೆ ನಾವು  ನಾಯಿ ಮಾಲೀಕರಿಗೆ ಮನವರಿಕೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸಿದೆವು. ಆದರೆ ಅವರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಉದ್ಯಾನವನಗಳು ಇರುವುದು ಜನಸಮುದಾಯದವರಿಗಾಗಿ. ಸಾಕುನಾಯಿಗಳಿಂದ  ಹಾಳುಗೆಡುವುದ್ದಕ್ಕಲ್ಲ ಎಂದಿದ್ದಾರೆ.
 
ಈ ದಂಡದ ಕುರಿತು ನಾಯಿಗಳ ಮಾಲೀಕರಿಗೆ ಎಚ್ಚರಿಕೆ ನೀಡಲು, ಎರಡು ದಿನಗಳೊಳಗಾಗಿ ಪ್ರತಿ ಪಾರ್ಕ್‌ನಲ್ಲಿ 2 ನಾಮಫಲಕಗಳನ್ನು ನೆಡುತ್ತಿದ್ದೇವೆ ಎಂದು ಭಾಟಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ