ಸಂಜಯ್ ದತ್ ಬಿಡುಗಡೆ ತಡೆ ಕೋರಿ ಅರ್ಜಿ

ಶುಕ್ರವಾರ, 8 ಜನವರಿ 2016 (14:02 IST)
1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 5 ವರ್ಷ ಜೈಲು ಶಿಕ್ಷೆಗೊಳಗಾಗಿರುವ ಬಾಲಿವುಡ್ ಪ್ರಖ್ಯಾತ ನಟ ಸಂಜಯ್ ದತ್ ಅವರನ್ನು ಅವಧಿಪೂರ್ವ ಬಿಡುಗಡೆ ಮಾಡುತ್ತಿರುವುದಕ್ಕೆ ತಡೆ ಕೋರಿ ಮುಂಬೈ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

ಪ್ರದೀಪ್ ಭಲೇಕರ್ ಎನ್ನುವವರು ಈ ಅರ್ಜಿಯನ್ನು ಸಲ್ಲಿಸಿದ್ದು ಸಂಜಯ್ ದತ್ ಅವರಂತೆಯೇ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಬೇಕೆಂದರೆ ಅಂತಹ 27,740 ಮಂದಿ ಕೈದಿಗಳು ಜೈಲಿನಲ್ಲಿದ್ದಾರೆ. ಆದರೆ, ಸಂಜಯ್ ದತ್ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಅವರಿಗೆ ಮಾತ್ರ ಬಿಡುಗಡೆ ಭಾಗ್ಯವನ್ನು ನೀಡಲಾಗುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.  ಹೈಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಕಾದಿಟ್ಟಿದೆ. 
 
ರಾಜ್ಯ ಗೃಹ ಇಲಾಖೆಯ ಪ್ರಕಾರ ಸನ್ನಡತೆ ಮತ್ತು ಜೈಲಿನಲ್ಲಿ ಅವರು ಮಾಡಿರುವ ಕೆಲಸದ ಆಧಾರದ ಮೇಲೆ ದತ್ ಅವರನ್ನು ಫೆಬ್ರವರಿ 27 ರಂದು ಬಿಡುಗಡೆ ಮಾಡಲಾಗುತ್ತದೆ. ಅವರ ಶಿಕ್ಷಾವಧಿಯನ್ನು 18 ತಿಂಗಳು ಕಡಿತಗೊಳಿಸಲಾಗಿದೆ. ದತ್ ಒಟ್ಟು ಮೂರುವರೆ ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ.  ಅದರಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲುವಾಸ ಸವೆಸಿದ ದಿನಗಳು ಸಹ ಸೇರಿವೆ. 
 
ಜೈಲಿನ ಹಿರಿಯ ಅಧಿಕಾರಿಗಳು ಸಹ ಸಂಜಯ್ ದತ್ ಫೇವರ್ ಆಗಿ ನಡೆದುಕೊಂಡಿದ್ದು, ಅವರ ಆಸ್ತಿಪಾಸ್ತಿಗಳ ಕುರಿತು ಸಹ ತನಿಖೆ ನಡೆಸಬೇಕು ಎಂದು ಅರ್ಜಿದಾರರು ಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ