ಬಿಜೆಪಿಗೆ ಸೇರಿದ ಪ್ರಧಾನಿ ಮನ್‌ಮೋಹನ್ ಸಹೋದರ

ಶನಿವಾರ, 26 ಏಪ್ರಿಲ್ 2014 (10:23 IST)
ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವಂತಹ ಸನ್ನಿವೇಶಕ್ಕೆ ಕಾರಣರಾಗಿರುವ ಪ್ರಧಾನಮಂತ್ರಿ ಮಲ ಸಹೋದರ ದಲ್‌ಜೀತ್ ಸಿಂಗ್ ಕೊಹ್ಲಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. 
 
ಸ್ಥಳೀಯ ವ್ಯಾಪಾರಿ ಕೊಹ್ಲಿ ಬಿಜೆಪಿ ಸೇರುವ ಮೊದಲ ದಿನ ಪ್ರಧಾನಿ ಸಿಂಗ್ ದೇಶದಲ್ಲಿ ಮೋದಿ ಅಲೆ ಇರುವುದನ್ನು ಅಲ್ಲಗಳೆದಿದ್ದರು. ಇಂತಹ ಸಮಯದಲ್ಲಿ ಅವರ ಸಹೋದರನೇ ಬಿಜೆಪಿ ಸೇರಿ ಪ್ರಧಾನಿ ಮತ್ತು ಕಾಂಗ್ರೆಸ್ಸಿಗೆ ಇರಿಸುಮುರಿಸು ಉಂಟುಮಾಡಿದ್ದಾನೆ. ಪಂಜಾಬಿನಲ್ಲಿ ಎಪ್ರೀಲ್ 30 ರಂದು ಒಂದೇ ಹಂತದ ಚುನಾವಣೆ ನಡೆಯಲಿದೆ. 
 
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ "ಇಂದು ಪ್ರಧಾನಿ ಸಹೋದರ ಬಿಜೆಪಿ ಸದಸ್ಯರಾಗಿದ್ದಾರೆ. ಕೊಹ್ಲಿ ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಪಕ್ಷದ  ಬಲವರ್ಧನೆಯಾಗಿದೆ. ನಮ್ಮ ಪಕ್ಷ ಸದಸ್ಯತ್ವದ ಮಾತನಾಡುವುದಿಲ್ಲ, ಬದಲಾಗಿ ನಾವು ಸಂಬಂಧವನ್ನು ಕಟ್ಟುತ್ತೇವೆ" ಎಂದು ಹೇಳಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಅಮೃತಸರದ ಬಿಜೆಪಿ ಅಭ್ಯರ್ಥಿ ಅರುಣ್ ಜೆಟ್ಲಿ ಕೊಹ್ಲಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. 

 
'ಈ ಆಕಸ್ಮಿಕ ಬೆಳವಣಿಗೆಯಿಂದ ಪ್ರಧಾನಿ ಪರಿವಾರ ದಿಗಿಲಿಗೊಳಗಾಗಿದೆ. ಆತನ ಉದ್ದೇಶ ಏನೆಂದು ತಿಳಿಯುತ್ತಿಲ್ಲ . ಆದರೆ ಆತನ ರಾಜಕೀಯ ವೃತ್ತಿ ಜೀವನವನ್ನು ಆಯ್ದುಕೊಳ್ಳುವಲ್ಲಿ ಆತ ಸ್ವತಂತ್ರನಾಗಿದ್ದಾನೆ' ಎಂದು ಪ್ರಧಾನಿ ಕುಟುಂಬ ಹೇಳಿದೆ ಎಂದು ಸಿಂಗ್ ಕಾರ್ಯಾಲಯದ ಮೂಲಗಳು ತಿಳಿಸಿವೆ.  


ಪ್ರಧಾನಿ ಮತ್ತು ಕೊಹ್ಲಿ ಬಹಳ ಸಮಯದಿಂದ ಸಂಪರ್ಕದಲ್ಲಿರಲಿಲ್ಲ ಎಂದು ತಿಳಿದು ಬಂದಿದೆ.

ತಮ್ಮ ತಮ್ಮನ ಈ ನಡೆಯ ಕುರಿತು ಆಶ್ಚರ್ಯ ವ್ಯಕ್ತಪಡಿಸಿರುವ ಕೊಹ್ಲಿ ಸಹೋದರ ಸುರ್ಜೀತ್ ಸಿಂಗ್ ಕೊಹ್ಲಿ "ನಾನು ಗಾಬರಿಗೊಳಗಾಗಿದ್ದೇನೆ. ಆತ ಯಾವಾಗಲೂ ಕಾಂಗ್ರೆಸ್ ಪರ ಬೆಂಬಲ ನೀಡುತ್ತಿದ್ದ" ಎಂದು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ