ಬಜೆಟ್ ಅಧಿವೇಶನ ಮುಂದಿರುವಂತೆಯೇ ವಿಪಕ್ಷ ನಾಯಕರ ಸಭೆ ಕರೆದ ಪ್ರಧಾನಿ ಮೋದಿ

ಸೋಮವಾರ, 15 ಫೆಬ್ರವರಿ 2016 (19:40 IST)
ಮುಂದಿನ ವಾರದಲ್ಲಿ ನಡೆಯಲಿರುವ ಬಜೆಟ್ ಅಧಿವೇಶನನ ಸುಲಲಿತವಾಗಿ ಸಾಗುವಂತಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
 
ಪ್ರಧಾನಿ ಮೋದಿ ನಾಳೆ ಬೆಳಿಗ್ಗೆ ಪ್ರಮುಖ ರಾಜಕೀಯ ಪಕ್ಷಗಳ ಲೋಕಸಭೆ ಮತ್ತು ರಾಜ್ಯಸಭೆಯ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಆದರೆ, ಇದು ಸರ್ವಪಕ್ಷಗಳ ಸಭೆಯಾಗಿಲ್ಲವಾದ್ದರಿಂದ ಅಧಿವೇಶನದಲ್ಲಿ ಮಂಡಿಸಲಿರುವ ಮಸೂದೆಗಳ ಕುರಿತಂತೆ ಚರ್ಚೆಯಾಗುವುದು ಎಂದು ಸರಕಾರಿ ಮೂಲಗಳು ತಿಳಿಸಿವೆ.
 
ಬಜೆಟ್ ಅಧಿವೇಶನ ಸುಗಮವಾಗಿ ನಡೆಯುವಂತಾಗಲು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರುಗಳ ಸಹಕಾರ ಕೋರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದರಿಂದ ಕಾಂಗ್ರೆಸ್ ಅಧಿನಾಯಿಕ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅನಗತ್ಯವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹಲವು ಸಾರ್ವಜನಿಕ ಸಭೆಗಳಲ್ಲಿ ಆರೋಪಿಸಿದ್ದಾರೆ.
 
ಸದನದಲ್ಲಿ ಬಡವರ ಮತ್ತು ಜನಸಾಮಾನ್ಯರ ಪರವಾಗಿರುವ ಸಮಸ್ಯೆಗಳನ್ನು ಎತ್ತಿದಾಗಲೆಲ್ಲಾ ಕಾಂಗ್ರೆಸ್ ಪಕ್ಷದ ಧ್ವನಿ ಅಡಗಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ಸೋನಿಯಾ ಗಾಂಧಿ ತೀರುಗೇಟು ನೀಡಿದ್ದರು.
 
ರಾಜ್ಯಸಭೆಯಲ್ಲಿ ನೆನೆಗುದಿಯಲ್ಲಿರುವ ಜಿಎಸ್‌ಟಿ ಮಸೂದೆ ಅಂಗೀಕಾರವಾಗದಿರಲು ಕಾಂಗ್ರೆಸ್ ನಾಯಕತ್ವವೇ ಕಾರಣವಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕರು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ