ಪ್ರತಿ ಸೋಮವಾರದಂದು ಪಕ್ಷದ ವಕ್ತಾರರು ಜೇಟ್ಲಿ ಭೇಟಿಯಾಗಲೇ ಬೇಕು : ಮೋದಿ

ಮಂಗಳವಾರ, 29 ಜುಲೈ 2014 (14:10 IST)
ಸರಕಾರ ಮತ್ತು ಪಕ್ಷದ ನಡುವೆ ಸಹಕಾರ ಸಮನ್ವತೆಯನ್ನು ಕಾಪಾಡುವ ದೃಷ್ಟಿಯಿಂದ ವಾರದಲ್ಲಿ ಒಂದು ದಿನ ಪಕ್ಷದ ವಕ್ತಾರರು ಕೇಂದ್ರ ರಕ್ಷಣಾ ಖಾತೆ ಸಚಿವ ಅರುಣ್ ಜೇಟ್ಲಿಯವರನ್ನು ಭೇಟಿಯಾಗಿ ಚರ್ಚೆ ನಡೆಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆದೇಶ ಹೊರಡಿಸಿದ್ದಾರೆ.
 
ಪ್ರಧಾನಮಂತ್ರಿ ಕಚೇರಿಯ ವರದಿಗಳ ಪ್ರಕಾರ, ಬಿಜೆಪಿ ಮತ್ತು ಸರಕಾರದ ವಕ್ತಾರರು ಪ್ರತಿ ಸೋಮವಾರದಂದು ಜೇಟ್ಲಿಯವರನ್ನು ಭೇಟಿಯಾಗಬೇಕು ಎಂದು ಮೋದಿ ಆದೇಶಿಸಿರುವುದಾಗಿ ತಿಳಿಸಿವೆ. 
 
ಹಲವಾರು ವಿಷಯಗಳ ಬಗ್ಗೆ ಸರಕಾರ ಮತ್ತು ವಕ್ತಾರರ ಮಧ್ಯೆಯ ಸಂಪರ್ಕದ ಕೊರತೆಯಿಂದಾಗಿ ಅನಗತ್ಯ ವಿವಾದಗಳಿಗೆ ಎಡೆಮಾಡಿಕೊಡಬಾರದು ಎನ್ನುವುದೇ ಪ್ರಮುಖ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
 
ಹಲವು ವಿಷಯಗಳ ಬಗ್ಗೆ ಸರಕಾರದ ನಿಲುವುಗಳ ಬಗ್ಗೆ ಪಕ್ಷದ ವಕ್ತಾರರಿಗೆ ಮಾಹಿತಿ ನೀಡಿದಲ್ಲಿ, ಜನತೆಗೆ ಸೂಕ್ತ ಮಾಹಿತಿ ನೀಡಲು ಸಾಧ್ಯವಾಗುತ್ತದೆ ಎನ್ನುವುದು ಮೋದಿ ನಿಲುವಾಗಿದೆ. 
 
ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕೂಡಾ ಸಚಿವ ಜೇಟ್ಲಿಯವರೊಂದಿಗೆ ಸಭೆಯಲ್ಲಿ ಉಪಸ್ಥಿತರಿದ್ದು, ಪಕ್ಷದ ವಕ್ತಾರರಿಗೆ ಸಲಹೆಗಳನ್ನು ನೀಡಲಿದ್ದಾರೆ ಎಂದು ಪ್ರಧಾನ ಮಂತ್ರಿಯ ಕಚೇರಿ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ