ಪ್ರಧಾನಿ ಮೋದಿ, ಕೈಲಾಶ್ ಸತ್ಯಾರ್ಥಿ ವಿಶ್ವದ ಮಹಾನ್ ನಾಯಕರು: ಫಾರ್ಚೂನ್

ಶುಕ್ರವಾರ, 27 ಮಾರ್ಚ್ 2015 (17:30 IST)
ಪ್ರಧಾನಿ ನರೇಂದ್ರ ಮೋದಿ ಮತ್ತು ನೊಬೆಲ್ ಪುರಷ್ಕೃತ  ಕೈಲಾಶ್ ಸತ್ಯಾರ್ಥಿ ಫಾರ್ಚೂನ್ ನಿಯತಕಾಲಿಕ ಪ್ರಕಟಿಸಿರುವ ವಿಶ್ವದ 50 ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವ್ಯಾಪಾರ, ಸರ್ಕಾರ ಮತ್ತು ಸಮಾಜಸೇವೆಯಲ್ಲಿ ಪರಿವರ್ತನೆ ತಂದಿರುವ "ಅಸಾಮಾನ್ಯ" ಪುರುಷರ ಮತ್ತು ಮಹಿಳೆಯರನ್ನು ಗುರುತಿಸಿ ಪತ್ರಿಕೆ ಪಟ್ಟಿಯನ್ನು ಸಿದ್ಧಪಡಿಸಿದೆ. 

2015 ರ ಸಾಲಿನ ವಿಶ್ವದ ಮಹಾನ ನಾಯಕರ ಪಟ್ಟಿಯಲ್ಲಿ ಮೋದಿ 5 ನೇ ಸ್ಥಾನ ಪಡೆದಿದ್ದರೆ, ಸತ್ಯಾರ್ಥಿ 28ನೇ ಸ್ಥಾನದಲ್ಲಿದ್ದಾರೆ. 
 
ಆಪಲ್ ಸಿಇಒ ಟಿಮ್ ಕುಕ್ ಮೊದಲ ಸ್ಥಾನದಲ್ಲಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಸತತ ಎರಡನೇ ಬಾರಿಗೆ ಪಟ್ಟಿಯಿಂದ ಹೊರಗಿಡಲಾಗಿದೆ. 
 
ಇದಕ್ಕೆ ಸಮಜಾಯಿಸಿ ಕೊಟ್ಟಿರುವ ಪತ್ರಿಕೆ, "ಆಂತರಿಕವಾಗಿ ಮತ್ತು ಜಾಗತಿಕವಾಗಿ ಸಮಸ್ಯೆ ಎದುರಿಸುವಲ್ಲಿ ಒಬಾಮಾ ಎಡವಿದ್ದಾರೆ" ಎಂದು ಪತ್ರಿಕೆ ಹೇಳಿದೆ.
 
ಮೋದಿಯವರು ತಾವು ಚುನಾವಣೆ ಸಂದರ್ಭದಲ್ಲಿ ಮಾಡಿದ್ದ ಭರವಸೆಗಳನ್ನು ಈಡೇರಿಸುವ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಿದ್ದು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಭಾರತವನ್ನು ವ್ಯಾಪಾರ ಸ್ನೇಹಿ ಮಾಡುವುದರತ್ತ ಗಮನ ನೆಟ್ಟಿರುವ ಅವರು, ಮಹಿಳಾ ಶೋಷಣೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ, ನೈರ್ಮಲ್ಯ ಸುಧಾರಣೆಗೆ ಒತ್ತು ನೀಡಿದ್ದಾರೆ ಮತ್ತು ಇತರ ಏಷ್ಯನ್ ರಾಷ್ಟ್ರಗಳು ಮತ್ತು ಅಮೇರಿಕಾದೊಂದಿಗೆ ಸೌಹಾರ್ದ ಸಂಬಂಧಗಳನ್ನು ಬೆಳೆಸುವ ಮೂಲಕ ಹೊಸ ಹೆಜ್ಜೆಗಳನ್ನಿಟ್ಟಿದ್ದಾರೆ ಎಂದು ಫಾರ್ಚೂನ್ ಹೇಳಿದೆ. 
 
"ವ್ಯಾಪಕವಾಗಿರುವ ಭ್ರಷ್ಟ ಅಧಿಕಾರಶಾಹಿಯನ್ನು ಸುಧಾರಣೆ ಮಾಡುವುದು ಮತ್ತು ಭಾರತವನ್ನು ಬಲಿಷ್ಠವಾಗಿಸುವ ದಿಶೆಯಲ್ಲಿ ಮೋದಿಯವರು ತಮ್ಮ ಗುರಿಗಳನ್ನು ಸಂಪೂರ್ಣವಾಗಿ ಸಾಧಿಸಲು ಇನ್ನೂ ಬಹಳ ದೂರ ಕ್ರಮಿಸಬೇಕಿದೆ", ಎಂದು ಪತ್ರಿಕೆ ಅಭಿಪ್ರಾಯ ವ್ಯಕ್ತಪಡಿಸಿದೆ. 

ವೆಬ್ದುನಿಯಾವನ್ನು ಓದಿ