ಪ್ರಭಾವಶಾಲಿ ಭಾರತೀಯರ ಪಟ್ಟಿಯಲ್ಲಿ ಮೋದಿ ನಂಬರ್ ಒನ್, ಭಾಗವತ್‌ಗೆ 2ನೇ ಸ್ಥಾನ

ಭಾನುವಾರ, 28 ಫೆಬ್ರವರಿ 2016 (10:44 IST)
100 ಪ್ರಭಾವಶಾಲಿ ಭಾರತೀಯರ ಪಟ್ಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಗ್ರ ಸ್ಥಾನ ಪಡೆದಿದ್ದಾರೆ. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
 
ಅಸಹಿಷ್ಣುತೆ, ಬಿಹಾರ್ ಸೋಲು, ರೋಹಿತ್ ವೆಮುಲಾ ಆತ್ಮಹತ್ಯೆ, ಜೆಎನ್‌ಯು ವಿವಾದ ಸೇರಿದಂತೆ ಹಲವು ವಿವಾದಗಳ ಮಧ್ಯೆಯೂ ಪ್ರಧಾನಿ ಮೋದಿ ಜನಪ್ರಿಯತೆಗೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ ಎಂದು ಸಮೀಕ್ಷೆ ನಡೆಸಿದ ಇಂಡಿಯನ್ ಎಕ್ಸ್‌ಪ್ರೆಸ್ ತಿಳಿಸಿದೆ.
 
ಕೇಂದ್ರ ಸರಕಾರದ ಮೇಲಿರುವ ಹಿಡಿತ ಮತ್ತು ಸಂಘಟನೆ ಮೇಲಿರುವ ಪ್ರಭಾವದಿಂದಾಗಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಎರಡನೇ ಸ್ಥಾನ ಪಡೆದಿದ್ದಾರೆ. 
 
ಹಿಂದು ಸಂಘಟನೆಯಾಗಿ ಕೇಂದ್ರ ಸರಕಾರದಿಂದ ದೂರವಿರುವುದಾಗಿ ಆರೆಸ್ಸೆಸ್ ಭರವಸೆ ನೀಡಿದ್ದರೂ ಪ್ರಧಾನಿ ಮೋದಿಗೆ ಸಂಘ ಪರಿವಾರದ ಸಂಪೂರ್ಣ ಬೆಂಬಲವಿದೆ ಎನ್ನುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಸಮೀಕ್ಷೆಯಲ್ಲಿ ಪ್ರಕಟಿಸಲಾಗಿದೆ.
 
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೂರನೇ ಸ್ಥಾನ ಪಡೆದಿದ್ದರೆ, ಅರುಣ್ ಜೇಟ್ಲಿ ಮತ್ತು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಒಂಬತ್ತನೇ ಸ್ಥಾನ ಪಡೆದಿದ್ದಾರೆ.
 
ಕಳೆದ 2015ರಲ್ಲಿ ರಾಹುಲ್ ಗಾಂಧಿ ರಾಜಕೀಯದಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದು ಮತ್ತು ಸರಕಾರವನ್ನು ಟೀಕಿಸುತ್ತಾ ತುಂಬಾ ಚಟುವಟಿಕೆಯಲ್ಲಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
 
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 8ನೇ ಸ್ಥಾನ ಪಡೆದಿದ್ದಾರೆ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಸಲ್ಮಾನ್ ಖಾನ್, ಶಾರುಕ್ ಖಾನ್, ವಿರಾಟ್ ಕೊಹ್ಲಿ, ಸೈನಾ ನೆಹ್ವಾಲ್, ಸಾನಿಯಾ ಮಿರ್ಜಾ, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಕೂಡಾ 100 ಪ್ರಭಾವಶಾಲಿ ಭಾರತೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ವೆಬ್ದುನಿಯಾವನ್ನು ಓದಿ