ಪ್ರಧಾನಿ ಮೋದಿ ಪೊಳ್ಳು ಭರವಸೆಗಳ ಸರದಾರ: ರಾಹುಲ್ ಗಾಂಧಿ

ಮಂಗಳವಾರ, 29 ಮಾರ್ಚ್ 2016 (15:50 IST)
ಮುಂದಿನ  ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆಸ್ಸಾಂ ರಾಜ್ಯದ ದಿಫು ಜಿಲ್ಲೆಗೆ ಭೇಟಿ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮೋದಿಜಿ ಬರುತ್ತಾರೆ, ಭರವಸೆ ನೀಡುತ್ತಾರೆ ಮತ್ತು ಹೋಗುತ್ತಾರೆ. ಮೋದಿ ಯಾವುದಾದರೂ ಭರವಸೆ ಈಡೇರಿಸಿದ್ದಾರಾ ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ ಎಂದು ತಿರುಗೇಟು ನೀಡಿದರು. 
 
ಕಳೆದ 15 ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಶಾಂತಿ, ನೆಮ್ಮದಿ ತಂದಿರುವುದು ಬಹುದೊಡ್ಡ ಸಾಧನೆ. ನಾನು ಆಸ್ಸಾಂ ರಾಜ್ಯಕ್ಕೆ ಬಂದಾಗಲೆಲ್ಲಾ ಸಿಎಂ ಗೋಗೈಯವರು ಜನತೆಯ ಬಗ್ಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ನನ್ನೊಂದಿಗೆ ಚರ್ಚಿಸುತ್ತಾರೆ. ನಿಮಗೆ ನೆರವಾಗಲು ಸದಾ ಸಿದ್ದರಾಗಿದ್ದಾರೆ. ದೇಶದಲ್ಲಿ ಪ್ರತಿಯೊಬ್ಬರಿಗೆ ಸಮಾನ ಹಕ್ಕು ಇರಬೇಕು ಎನ್ನುವುದು ನಾವು ಬಯಸುತ್ತೇವೆ ಎಂದರು. 
 
ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ಹಿಂಸಾಚಾರ ತಾಂಡವವಾಡುತ್ತಿದೆ. ಗುಜರಾತ್‌ನಲ್ಲಿ ಏನಾಯಿತು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ಇತ್ತೀಚೆಗೆ ಬಿಜೆಪಿ ಅಧಿಕಾರವಿರುವ ಹರಿಯಾಣಾದಲ್ಲಿ ಏನಾಯಿತು ಎನ್ನುವುದು ತಿಳಿದಿದೆ. ಕಾಂಗ್ರೆಸ್ ಪಕ್ಷ ಹರಿಯಾಣಾದಲ್ಲಿ 10 ವರ್ಷಗಳ ಸರಕಾರ ನಡೆಸಿದ್ದರೂ ಒಂದೇ ಒಂದು ಗಲಭೆಯಾಗಿರಲಿಲ್ಲ ಎಂದು ತಿಳಿಸಿದ್ದಾರೆ.
 
ಆಸ್ಸಾಂ ರಾಜ್ಯಕ್ಕೆ ಕಾಂಗ್ರೆಸ್ ಸರಕಾರ ನೀಡಿದ್ದ ವಿಶೇಷ ರಾಜ್ಯ ಸ್ಥಾನಮಾನವನ್ನು ಮೋದಿ ಸರಕಾರ ರದ್ದುಗೊಳಿಸಿತು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ