ಉಪಚುನಾವಣೆ ಸೋಲು ಮೋದಿಗೆ ಮುಸ್ಲಿಮರ ಮೌಲ್ಯ ಅರ್ಥ ಮಾಡಿಸಿತು: ಗೋವಾ ಕಾಂಗ್ರೆಸ್

ಶನಿವಾರ, 20 ಸೆಪ್ಟಂಬರ್ 2014 (11:59 IST)
ಇತ್ತೀಚಿಗೆ ಕೊನೆಗೊಂಡ ಉಪ ಚುನಾವಣೆಯಲ್ಲಿ ತೀವೃ ನಿರಾಶೆಯನ್ನು ಕಂಡ ನಂತರವಷ್ಟೇ  ಪ್ರಧಾನಿ ಮೋದಿಯವರಿಗೆ ಭಾರತೀಯ ಮುಸ್ಲಿಮರ ಮೌಲ್ಯದ ಅರಿವಾಯಿತೇ? ಎಂದು ಗೋವಾ ಕಾಂಗ್ರೆಸ್ ವಕ್ತಾರ ಮತ್ತು ರಾಜ್ಯ ಉರ್ದು ಅಕಾಡೆಮಿ ಮುಖ್ಯಸ್ಥ ಉರ್ಫಾನ್ ಮುಲ್ಲಾ ವ್ಯಂಗ್ಯವಾಡಿದ್ದಾರೆ.  

ಉಪಚುನಾವಣೆ ಫಲಿತಾಂಶದಲ್ಲಿ ಅವಮಾನಕರ ಸೋಲನ್ನು ಕಂಡ ನಂತರ ಭಾರತೀಯ ಮುಸ್ಲಿಮರ ಬೆಲೆ ಏನೆಂದು ಪ್ರಧಾನಿಯವರಿಗೆ ವೇದ್ಯವಾಯಿತು ಎಂದು ಮುಲ್ಲಾ ಹೇಳಿದ್ದಾರೆ.
 
ಕಳೆದ ಗುರುವಾರ ಅಮೇರಿಕಾದ ಸುದ್ದಿವಾಹಿನಿಯೊಂದರ ಜತೆ  ಮಾತನಾಡುತ್ತಿದ್ದ ಪ್ರಧಾನಿ ಮೋದಿ "ನಮ್ಮ ದೇಶದ ಮುಸ್ಲಿಮರ ದೇಶಭಕ್ತಿ ಪ್ರಶ್ನಾತೀತವಾಗಿದೆ. ಅವರು ಭಾರತಕ್ಕಾಗಿ ಬದುಕುತ್ತಾರೆ, ಭಾರತಕ್ಕಾಗಿ ಜೀವ ಕೊಡುತ್ತಾರೆ. ಅವರು ದೇಶಕ್ಕೆ ಯಾವುದೇ ರೀತಿಯ ಅಹಿತವನ್ನು ಬಯಸಲಾರರು. ಭಾರತೀಯ ಮುಸ್ಲಿಮರು ತಮ್ಮ  ಪ್ರಭಾವಕ್ಕೆ ಒಳಗಾಗುತ್ತಾರೆ ಎಂಬುದು ಕೇವಲ ಅಲ್ ಖೈದಾದ ಭ್ರಮೆ" ಎಂದು ಹೇಳಿದ ಹಿನ್ನೆಲೆಯಲ್ಲಿ ಮುಲ್ಲಾ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
 
2014ರ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದ ಬಿಜೆಪಿ  ಕಳೆದ ವಾರ ನಡೆದ ಉಪಚುನಾವಣೆಯಲ್ಲಿ ನಿರಾಶಾದಾಯಕ ಪ್ರದರ್ಶನವನ್ನು ನೀಡಿದೆ. 
 
'ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಕೇಸರಿ ಪಕ್ಷದ ಕೆಲವು ಚುನಾಯಿತ ನಾಯಕರು ನಿರಂತರ ಪ್ರಚಾರ ಮಾಡುತ್ತಿದ್ದಾರೆ' ಎಂದು ಆರೋಪಿಸಿದ ಮುಲ್ಲಾ "ಭಾರತದ ಮುಸ್ಲಿಮರ ನೈಜತೆ ಬಗ್ಗೆ ಮೋದಿ ತಮ್ಮ ಪಕ್ಷದ ಶಾಸಕರಿಗೆ ಮತ್ತು ಸಂಸದರಿಗೂ ಪಾಠ ಮಾಡಬೇಕು" ಎಂದಿದ್ದಾರೆ.
 
"ಒಬ್ಬ ಮುಸ್ಲಿಮನಾಗಿ ಮೋದಿಯವರ ಈ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ" ಎಂದು ಮುಲ್ಲಾ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ