ವ್ಯಾಪಂ ಹಗರಣದಲ್ಲಿ ಪ್ರಧಾನಿಯ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ: ಡಿ.ರಾಜಾ

ಮಂಗಳವಾರ, 7 ಜುಲೈ 2015 (18:42 IST)
ವ್ಯಾಪಂ ಹಗರಣದ ಬಗ್ಗೆ ದೇಶದಲ್ಲಿ ಕೋಲಾಹಲ ಎದುರಾಗಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಿಪಿಐ ನಾಯಕ ಡಿ.ರಾಜಾ ಹೇಳಿದ್ದಾರೆ.
 
ವ್ಯಾಪಂ ಹಗರಣದ ಬಗ್ಗೆ ದೇಶಾದ್ಯಂತ ಚರ್ಚೆಗಳಾಗುತ್ತಿವೆ. ಹಗರಣದಲ್ಲಿ 48 ಮಂದಿ ಅಸಹಜ ಸಾವಿಗೀಡಾಗಿದ್ದಾರೆ. ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದ್ದಾರೆ.
 
ಹಗರಣಕ್ಕೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದಾಗ್ಯೂ ಘಟನೆ ಬಗ್ಗೆ ಮೋದಿ ಚಕಾರವೆತ್ತದೇ ತಮಾಷೆಯಂತೆ ನೋಡುತ್ತಿದ್ದಾರೆ. ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
 
ಇದಕ್ಕಿಂತ ಮೊದಲು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ವಿಪಕ್ಷಗಳ ಹಾಗೂ ಜನತೆಯ ಒತ್ತಡಕ್ಕೆ ಮಣಿದು ವ್ಯಾಪಂ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಸಿದ್ದ ಎಂದು ಘೋಷಿಸಿದ್ದಾರೆ.  
 
ವ್ಯಾಪಂ ಹಗರಣದ ಬಗ್ಗೆ ವಿಪಕ್ಷವಾದ ಕಾಂಗ್ರೆಸ್ ಪಕ್ಷ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ನನ್ನ ಹೆಸರಿಗೆ ಕಳಂಕ ತರಲು ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂದು ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ