ಭಾರತೀಯ ಮುಸ್ಲಿಮರು ದೇಶಕ್ಕಾಗಿ ಬದುಕುತ್ತಾರೆ,ದೇಶಕ್ಕಾಗಿ ಪ್ರಾಣ ಕೊಡುತ್ತಾರೆ: ಮೋದಿ

ಶುಕ್ರವಾರ, 19 ಸೆಪ್ಟಂಬರ್ 2014 (15:59 IST)
ಪ್ರಧಾನಿಯಾದ ನಂತರ ಪ್ರಥಮ ಅಂತರಾಷ್ಟ್ರೀಯ ಸಂದರ್ಶನವನ್ನೆದುರಿಸಿದ ಪ್ರಧಾನಿ ನರೇಂದ್ರ ಮೋದಿ ದೇಶಿಯ ಮುಸ್ಲಿಮರ ಬಗ್ಗೆ ಆಶ್ಚರ್ಯಕಾರಕ ಹೇಳಿಕೆಯನ್ನು ನೀಡಿದ್ದು 'ಭಾರತೀಯ ಮುಸ್ಲಿಮರ ದೇಶಭಕ್ತಿ ಪ್ರಶ್ನಾತೀತವಾಗಿದೆ' ಎಂದಿದ್ದಾರೆ.

ವಿದೇಶಿ ಸುದ್ದಿವಾಹಿನಿಯೊಂದಕ್ಕೆ  ಸಂದರ್ಶನ ನೀಡುತ್ತಿದ್ದ ಮೋದಿ "ನಮ್ಮ ದೇಶದ ಮುಸ್ಲಿಮರ ದೇಶಭಕ್ತಿ ಪ್ರಶ್ನಾತೀತವಾಗಿದೆ. ಅವರು ಭಾರತಕ್ಕಾಗಿ ಬದುಕುತ್ತಾರೆ, ಭಾರತಕ್ಕಾಗಿ ಜೀವ ಕೊಡುತ್ತಾರೆ. ಅವರು ದೇಶಕ್ಕೆ ಯಾವುದೇ ರೀತಿಯ ಅಹಿತವನ್ನು ಬಯಸಲಾರರು. ಭಾರತೀಯ ಮುಸ್ಲಿಮರು ತಮ್ಮ  ಪ್ರಭಾವಕ್ಕೆ ಒಳಗಾಗುತ್ತಾರೆ ಎಂಬುದು ಕೇವಲ ಅಲ್ ಖೈದಾದ ಭ್ರಮೆ" ಎಂದು ಹೇಳಿದ್ದಾರೆ. 
 
ಕಾಶ್ಮೀರ ಮತ್ತು ಗುಜರಾತ್‌ ಮುಸ್ಲಿಮರನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಭಾರತ ಹಾಗೂ ದಕ್ಷಿಣ ಏಷ್ಯಾಗೆ ಸೇರಿದ ಭಾಗದಲ್ಲಿ ಅಲ್ ಖೈದಾದ ಶಾಖೆ ತೆರೆಯುವ ಬಗ್ಗೆ ಉಗ್ರ ಸಂಘಟನೆ ಮುಖ್ಯಸ್ಥ ಮಾಡಿದ ವಿಡಿಯೋ ಮನವಿ ಮಾಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ "ಅಫ್ಘಾನಿಸ್ಥಾನ ಮತ್ತು ಪಾಕಿಸ್ತಾನಕ್ಕೆ ಹೋಲಿಸಿದರೆ ದೇಶದ 17 ಕೋಟಿ ಮುಸ್ಲಿಮರಲ್ಲಿ ಅಲ್ ಖೈದಾ ಜತೆಗೆ ಸೇರಿರುವವರು ಬಹಳ ವಿರಳ ಅಥವಾ ಇಲ್ಲವೇ ಇಲ್ಲ ಎಂದರು.
 
ಭಾರತೀಯ ಮುಸ್ಲಿಮರು ಅಲ್ ಖೈದಾ ಪ್ರಭಾವಕ್ಕೆ  ಒಳಗಾಗದಿರಲು ಕಾರಣವಾದರೂ ಏನು ಎಂದು ಕೇಳಿದ್ದಕ್ಕೆ, "ನಾನು ಈ ಪ್ರಶ್ನೆಗೆ ವಿಶ್ಲೇಷಣೆ ನಡೆಸುವ ಮಾನಸಿಕ ಅಥವಾ ಧಾರ್ಮಿಕ ಅಧಿಕಾರ ಹೊಂದಿಲ್ಲ. ವಿಶ್ವದಾದ್ಯಂತ ಮಾನವೀಯತೆಯನ್ನು ಸಮರ್ಥಿಸಿಕೊಳ್ಳಬೇಕೆ, ಬೇಡವೇ ಎಂಬ ಸವಾಲು ಎದುರಾಗಿದೆ. ಮಾನವೀಯತೆ ನಂಬಿದವರು ಒಗ್ಗೂಡಬೇಕೋ ಬೇಡವೋ? ಇದು ಮಾನವೀಯತೆಯ ವಿರುದ್ಧದ ಸಮಸ್ಯೆ, ಒಂದು ದೇಶ ಅಥವಾ ಜನಾಂಗದ ವಿರುದ್ಧದ ಬಿಕ್ಕಟ್ಟಂತೂ ಅಲ್ಲವೇ ಅಲ್ಲ. ಹಾಗಾಗಿ ನಾವಿದನ್ನು ಮಾನವೀಯತೆ ಮತ್ತು ಅಮಾನವೀಯತೆಯ ನಡುವಿನ ಹೋರಾಟ ಎಂಬ ತಳಹದಿಯ ಮೇಲೆ ನೋಡಬೇಕು" ಎಂದು ಅವರು ಹೇಳಿದರು.
 
ಈ ಸಂದರ್ಶನದ ಕೆಲ ಮುಖ್ಯಾಂಶಗಳನ್ನು  ಇಂದು ಪ್ರಸಾರ ಮಾಡಿರುವ ವಾಹಿನಿ ರವಿವಾರ ಪೂರ್ಣ ಭಾಗವನ್ನು ಪ್ರಸಾರ ಮಾಡಲಿದೆ. 

ವೆಬ್ದುನಿಯಾವನ್ನು ಓದಿ