ಯುಪಿಎ ಮಾಡಿರುವ ಮಾಲಿನ್ಯವನ್ನು ನಾವು ಸ್ವಚ್ಛಗೊಳಿಸುತ್ತಿದ್ದೇವೆ: ಮೋದಿ

ಶುಕ್ರವಾರ, 17 ಏಪ್ರಿಲ್ 2015 (16:35 IST)
ಹಿಂದಿನ ಯುಪಿಎ ಸರಕಾರದ ಮೇಲೆ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ ಈ ಮೊದಲಿನವರು ಮಾಡಿಟ್ಟಿರುವ ಕೊಳೆಯನ್ನು  ಸ್ವಚ್ಚಗೊಳಿಸಿ ಹಗರಣಗಳ ದೇಶವೆಂಬ ಹಣೆಪಟ್ಟಿಯನ್ನು 'ಕೌಶಲ್ಯ ಭಾರತ'ವೆಂದು ಬದಲಾಯಿಸುತ್ತೇವೆ ಎಂದು ವಾಗ್ದಾನ ಮಾಡಿದ್ದಾರೆ. 
 
ಟೊರೆಂಟೊದಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, "ಭಾರತ ಅನೇಕ ಸಮಸ್ಯೆಗಳನ್ನೆದುರಿಸುತ್ತಿದೆ.  ಅದಕ್ಕಿರುವುದು ಒಂದೇ ಒಂದು ಪರಿಹಾರ. ಅದು ಮೋದಿ ಎಂಬ ಮದ್ದಲ್ಲ. ಅಭಿವೃದ್ಧಿಯೊಂದೇ ಎಲ್ಲ ಸಮಸ್ಯೆಗಳಿಗಿರುವ ಪರಿಹಾರ.  ಕೇವಲ ವಿಕಾಸವೊಂದೇ ಭಾರತವನ್ನು ಮುಂದಕ್ಕೆ ಕೊಂಡೊಯ್ಯಬಲ್ಲದು", ಎಂದರು. ಕೆನಡಾ ಪ್ರಧಾನಿ ಹಾರ್ಪರ್ ಹಾಗೂ ಅವರ ಪತ್ನಿಯೂ ಸಹ ಈ ಸಂದರ್ಭದಲ್ಲಿ ಹಾಜರಿದ್ದರು. 
 
 
''ಕೊಳಕು ಮಾಡಬೇಕೆಂದುಕೊಂಡವರು ಕೊಳಕು ಮಾಡಿ ಮಾಡಿ ಹೋದರು, ಆದರೆ ನಾವದನ್ನು ಸ್ವಚ್ಛಗೊಳಿಸುತ್ತಿದ್ದೇವೆ,'' ಎಂದು ಹಿಂದಿನ ಯುಪಿಎ ಸರಕಾರವನ್ನು ಪರೋಕ್ಷವಾಗಿ ಪ್ರಧಾನಿ ದೂಷಿಸಿದರು. ಅವರ ಈ ಮಾತಿಗೆ ನೆರೆದವರು ಕಿವಿಗಡಚಿಕ್ಕುವ ಚಪ್ಪಾಳೆ ತಟ್ಟುತ್ತ ಮೋದಿ,ಮೋದಿ ಎಂಬ ಘೋಷಣೆ ಮೊಳಗಿಸಿದರು. 
 
''ನಮ್ಮದು ವಿಶಾಲವಾದ ದೇಶ . ಇಲ್ಲಿ ದೀರ್ಘಕಾಲದಿಂದ ಅವ್ಯವಸ್ಥೆ ಇದೆ. ಇದನ್ನು ಸರಿಪಡಿಸಲು ಸಾಕಷ್ಟು ಸಮಯಬೇಕು. ಜನರ ವರ್ತನೆಯನ್ನು ಬದಲಾಯಿಸುವುದರ ಮೂಲಕ ಇದನ್ನು ಸರಿಪಡಿಸಬಹುದು. ಈ ಮೊದಲು ದೇಶ ಹಗರಣಗಳ ದೇಶವೆಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿತ್ತು. ಅದು ಅಳಿಸಿ ಹೋಗಿ ನಮ್ಮದು 'ಕೌಶಲ್ಯ ಭಾರತ'ಎಂದು ಗುರುತಿಸಿಕೊಳ್ಳಬೇಕೆಂಬುದೇ ನಮ್ಮ ಆಕಾಂಕ್ಷೆ,'' ಎಂದು ಅವರು ಹೇಳಿದರು. 
 
ಮೋದಿಯವರ ಮಾತಿಗೆ ವಿರೋಧ ಪಕ್ಷ ತೀವೃ ಆಕ್ಷೇಪ ವ್ಯಕ್ತಪಡಿಸಿದ್ದು, ದೇಶದ ಮುಖ್ಯಸ್ಥರು ವಿದೇಶಕ್ಕೆ ಹೋದಾಗ ಇಡೀ ದೇಶವನ್ನು ಪ್ರತಿನಿಧಿಸುತ್ತಾರೆ. ಆದರೆ ಮೋದಿ ಭಾಷಣ, "ದೇಶದಲ್ಲಿ ಒಡಕುಂಟು ಮಾಡುವ, ಮಾನನಷ್ಟಕರ, ದುರುದ್ದೇಶಪೂರಿತ ಮತ್ತು ಸತ್ಯಕ್ಕೆ ದೂರವಾದುದಾಗಿದೆ", ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ