ರೈತ ಸಮ್ಮೇಳನ: ಫೆಬ್ರವರಿ 27ಕ್ಕೆ ಪ್ರಧಾನಿ ಮೋದಿ ಬೆಳಗಾವಿಗೆ

ಸೋಮವಾರ, 15 ಫೆಬ್ರವರಿ 2016 (16:42 IST)
ಫೆಬ್ರವರಿ 27 ರಂದು ಪ್ರಧಾನಿ ಮೋದಿ ಬೆಳಗಾವಿಯಲ್ಲಿ ರೈತ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹೊಸದಾಗಿ ಜಾರಿಯಲ್ಲಿ ತಂದಿರುವ ಬೆಳೆ ವಿಮೆ ಯೋಜನೆ ಸೇರಿದಂತೆ ತಮ್ಮ ಸರ್ಕಾರದ ರೈತ ಪರ ಯೋಜನೆಗಳ ಬಗ್ಗೆ ರೈತರಿಗೆ ಅರಿವನ್ನುಂಟು ಮಾಡುವ ಪ್ರಯತ್ನದ ಭಾಗವಾಗಿ ಮೋದಿ ಬೆಳಗಾವಿಗೆ ಆಗಮಿಸಿಲಿದ್ದಾರೆ. 
 
ಎನ್‌ಡಿಎ ಸರ್ಕಾರ ರಾಷ್ಟ್ರವ್ಯಾಪಿ ಆಯೋಜಿಸಿರುವ ರೈತ ಸಮ್ಮೇಳನಗಳಲ್ಲಿ ಬೆಳಗಾವಿಯದು ಮೂರನೆಯದಾಗಿದ್ದು ಉಳಿದೆರಡು ಸಮ್ಮೇಳನಗಳು ಮಧ್ಯಪ್ರದೇಶ್ ಮತ್ತು ಒಡಿಸಾದಲ್ಲಿ ನಡೆಯಲಿವೆ. 
 
ರೈತ ಸಮ್ಮೇಳನದಲ್ಲಿ ಮೋದಿಯವರು ''ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ"ಯ ಮುಖ್ಯಾಂಶಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಿದ್ದಾರೆ ಎಂದು ಬಿಜೆಪಿ ನಾಯಕ ಪ್ರಹ್ಲಾದ ಜೋಶಿ ಹೇಳಿದ್ದಾರೆ. 
 
ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿ ಮಂತ್ರಿ ಫಸಲು ವಿಮಾ ಯೋಜನೆಯನ್ನು ಆರಂಭಿಸಿದ್ದರು. ಆದರೆ ಯುಪಿಎ ಸರ್ಕಾರ ಇದರಲ್ಲಿ ಸ್ನೇಹಿಯಲ್ಲದ ತಿದ್ದುಪಡಿಗಳನ್ನು ತಂದು ರೈತರನ್ನು ಯಾತನೆಗೆ ದೂಡಿತು ಎಂದು ಜೋಶಿ ಆರೋಪಿಸಿದ್ದಾರೆ. 
 
ಈ ಹೊಸ ಯೋಜನೆಯ ಅಡಿಯಲ್ಲಿ ಪ್ರಥಮ ಹಂತದಲ್ಲಿ 50 ಲಕ್ಷ ರೈತರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಜೋಶಿ ಭರವಸೆ ನೀಡಿದ್ದಾರೆ. 
 
ಕಳಸಾ- ಬಂಡೂರಿ ಜಲ ಯೋಜನೆ ಕುರಿತಂತೆ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ರೈತರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. 

ವೆಬ್ದುನಿಯಾವನ್ನು ಓದಿ