ವಿಶ್ವದ ಮೂರನೇ ಬೃಹತ್ ಮಸೀದಿಗೆ ಭೇಟಿ ನೀಡಲಿರುವ ಪ್ರದಾನಿ ಮೋದಿ

ಶುಕ್ರವಾರ, 14 ಆಗಸ್ಟ್ 2015 (18:40 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 16 ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಗೆ ಎರಡು ದಿನಗಳ ಪ್ರವಾಸದ ಸಂದರ್ಭದಲ್ಲಿ ವಿಶ್ವದ ಮೂರನೇಯ ಬೃಹತ್ ಮಸೀದಿಗಳಲ್ಲೊಂದಾದ ಶೇಖ್ ಜಾಯದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡಲಿದ್ದಾರೆ.
 
ಶೇಖ್ ಜಾಯದ್ ಗ್ರ್ಯಾಂಡ್ ಮಸೀದಿಯನ್ನು ಇಸ್ಲಾಮಿಕ್ ಜಗತ್ತಿನ ಸಾಂಸ್ಕ್ರತಿಕ ಕೇಂದ್ರವೆಂದು ಕರೆಯಲಾಗುತ್ತದೆ. 
 
ಕಳೆದ ಜೂನ್ ತಿಂಗಳಲ್ಲಿ ತುರ್ಕಮೇನಿಸ್ತಾನ್ ದೇಶಕ್ಕೆ ಮೋದಿ ಪ್ರವಾಸ ಕೈಗೊಂಡಾಗ ಅಲ್ಲಿನ ಪವಿತ್ರ ದರ್ಗಾಕ್ಕೆ ಭೇಟಿ ನೀಡಿದ್ದರು. ದರ್ಗಾದ ಇಬ್ಬರು ಮೌಲ್ವಿಗಳೊಂದಿಗೆ ಅದರ ಮುಂದೆ ಪೋಸ್ ಕೊಟ್ಟಿದ್ದ ಫೋಟೋ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿತ್ತು.
 
ಮೋದಿ ಆಗಸ್ಟ್ 16 ರಂದು ಅಬುಧಾಬಿಗೆ ತಲುಪಲಿದ್ದು ಯುಎಇ ಪ್ರಧಾನಿ ಮತ್ತಿತರರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೋದಿಯವರ ಕನಸಾದ ಸ್ಮಾರ್ಟ್ ಸಿಟಿ ಮಸ್ದರ್ ಸಿಟಿಗೆ ಭೇಟಿ ನೀಡಲಿದ್ದಾರೆ.
 
ಪ್ರಧಾನಮಂತ್ರಿ ಮೋದಿ ಆಗಸ್ಟ್ 17 ರಂದು ದುಬೈಗೆ ಭೇಟಿ ನೀಡಲಿದ್ದು, ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸ್ಥಳೀಯ ಆಯೋಜಕರ ಪ್ರಕಾರ ಸುಮಾರು 48 ಸಾವಿರ ಭಾರತೀಯರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ ಎನ್ನಲಾಗಿದೆ. 
 

ವೆಬ್ದುನಿಯಾವನ್ನು ಓದಿ