'ಟೈಮ್' ವರ್ಷದ ವ್ಯಕ್ತಿ ಪ್ರಧಾನಿ ಮೋದಿ

ಸೋಮವಾರ, 5 ಡಿಸೆಂಬರ್ 2016 (16:49 IST)
ನ್ಯೂಯಾರ್ಕ್‌ನ ಪ್ರತಿಷ್ಠಿತ ಟೈಮ್ ನಿಯತಕಾಲಿಕೆ ಕೈಗೊಂಡ ಅಂತರ್ಜಾಲ ಓದುಗರ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ 'ವರ್ಷದ ವ್ಯಕ್ತಿ' (2016) ಯಾಗಿ ಆಯ್ಕೆಯಾಗಿದ್ದಾರೆ. 
ಅಮೇರಿಕಾದ ಅಧ್ಯಕ್ಷ ಗಾದಿಯಿಂದ ನಿರ್ಗಮಿಸುತ್ತಿರುವ ಬರಾಕ್ ಒಬಾಮಾ, ಮುಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಂತಹ ದಿಗ್ಗಜರನ್ನು ಹಿಂದಕ್ಕೆ ತಳ್ಳಿ ಮೋದಿ ಈ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. 
 
ವಿಶ್ವದ ಅಗ್ರಗಣ್ಯ ನಾಯಕರು, ಕಲಾವಿದರು, ಪ್ರತಿಷ್ಠಿತರು ಈ ಸ್ಪರ್ಧೆಯಲ್ಲಿದ್ದು, ನಿನ್ನೆ ರಾತ್ರಿ ಕೊನೆಗೊಂಡ ವೋಟಿಂಗ್ ಬಳಿಕ ಮೋದಿ 18 ಪ್ರತಿಶತ ಮತಗಳನ್ನು ಗಳಿಸಿ ಅಗ್ರಸ್ಥಾನಕ್ಕೇರಿದರು. ಒಬಾಮಾ, ಟ್ರಂಪ್, ವಿಕಿಲೀಕ್ಸ್ ಸಂಸ್ಥಾಪಕ ಅಸಾಂಜ್ ತಲಾ 7% ಮತಗಳನ್ನು ಗಳಿಸಿ ಮೋದಿ ಬೆನ್ನ ಹಿಂದಿದ್ದಾರೆ.
 
ಉಳಿದಂತೆ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಮತ್ತು ಅಮೇರಿಕದ ಅಧ್ಯಕ್ಷ ಪದವಿಗೆ ಕಣಕ್ಕಿಳಿದು ಸೋತ ಹಿಲೆರಿ ಕ್ಲಿಂಟನ್ ಪ್ರತಿಶತ 2ರಷ್ಟು ಮತಗಳನ್ನು ಪಡೆಯಲು ಶಕ್ತರಾಗಿದ್ದಾರೆ. 
 
ಮೋದಿ ಅವರು ಈ ಹೆಗ್ಗಳಿಕೆಗೆ ಪಾತ್ರರಾಗಿರುವುದು ಇದು ಎರಡನೆಯ ಬಾರಿ. 2014ರಲ್ಲಿ ಸಹ 14% ಮತಗಳನ್ನು ಪಡೆಯುವುದರ ಮೂಲಕ ಆ ಸಾಲಿನ ಅತ್ಯಂತ ಪ್ರಭಾವಿ ವ್ಯಕ್ತಿ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದರು. 2015ರಲ್ಲಿ ಜರ್ಮನಿಯ ಎಂಜೆಲಾ ಮೆರ್ಕೆಲ್ ಈ ಶ್ರೇಯವನ್ನು ಸಂಪಾದಿಸಿದ್ದರು.
 
ಸತತ ನಾಲ್ಕನೆಯ ಬಾರಿಗೆ ಪ್ರಧಾನಿ ಮೋದಿ ಟೈಮ್ ವರ್ಷದ ವ್ಯಕ್ತಿ ಕಣದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ