6 ವರ್ಷದ ಮಗುವಿಗೆ ಪತ್ರ ಬರೆದ ಪ್ರಧಾನಿ ಮೋದಿ

ಮಂಗಳವಾರ, 17 ಮಾರ್ಚ್ 2015 (17:05 IST)
ಬಡ ಮಕ್ಕಳ ಶಿಕ್ಷಣಕ್ಕಾಗಿ ತಾನು ಪಿಗ್ಗಿ ಬ್ಯಾಂಕ್‌ನಲ್ಲಿ ಉಳಿತಾಯ ಮಾಡಿದ್ದ ಹಣವನ್ನು ನೀಡಿದ್ದ 6 ವರ್ಷದ ಪುಟ್ಟ ಬಾಲಕನಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.  ದೆವಾಸ್ ನಿವಾಸಿ ಬಾಲಕ ಭವ್ಯಾ ಆವ್ಟೆ ಎಂಬುವವಳ ಮನೆಯ ಸದಸ್ಯರು ಪ್ರಧಾನಿ ಮೋದಿಯವರಿಂದ ತಮ್ಮ ಮಗನಿಗೆ ಬಂದ ಪತ್ರ ನೋಡಿ ಆಶ್ಚರ್ಯಚಕಿತರಾಗಿದ್ದು ಅವರ ಆನಂದಕ್ಕೆ ಪಾರವಿಲ್ಲದಾಗಿದೆ.

ನೀನು ಬಡ ಮಕ್ಕಳ ಕಲ್ಯಾಣಕ್ಕಾಗಿ 107 ರೂಪಾಯಿಗಳನ್ನು ನೀಡಿರುವುದು ನನಗೆ ಗೊತ್ತಾಯಿತು ಎಂದು ಪತ್ರದಲ್ಲಿ ಮೋದಿ ಮಗುವಿನ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸಂದೀಪ್ ಆವ್ಟೆ ಎಂಬುವವರ ಮಗನಾದ ಭವ್ಯ  ತನ್ನ ಪರಿವಾರದೊಂದಿಗೆ ಇಂದೋರ್‌ನಿಂದ 40 ಕೀಲೋಮೀಟರ್ ದೂರದಲ್ಲಿರುವ ದೇವಾಸ್‌ನ ಕೋಥುವಾಲಿಯಲ್ಲಿ ವಾಸಿಸುತ್ತಾನೆ.

"ಶಾಲೆಗೆ ಹೋಗದ ಬಡ ಮಕ್ಕಳು ರಸ್ತೆಗಳಲ್ಲಿ ಓಡಾಡುವುದನ್ನು ನಾನು ನೋಡಿದ್ದೇನೆ. ಟಿವಿಯಲ್ಲಿ ಸಹ ಅನೇಕ ಬಾರಿ ನಾನಿದನ್ನು ಕಂಡಿದ್ದೇನೆ. ಆದ್ದರಿಂದ  ನಾನು 107 ರೂಪಾಯಿಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ. ಅದನ್ನು ಬಳಸಿಕೊಂಡು ಬಡಮಕ್ಕಳು  ನನ್ನ ಹಾಗೆ ಶಾಲೆಗೆ ಹೋಗಿ ವಿದ್ಯೆ ಕಲಿಯುವಂತಾಗಲಿ", ಎಂದು ಪುಟ್ಟ ಬಾಲಕ ಮೋದಿಯವರಿಗೆ ಪತ್ರ ಬರೆದಿದ್ದ.

ಇದಕ್ಕೆ ಪ್ರತಿಯಾಗಿ ಉತ್ತರ ಬರೆದ ಪ್ರಧಾನಿ, "ನಿನ್ನ ಕಾಳಜಿಯನ್ನು ನೋಡಿ ನನಗೆ ಸಂತೋಷವಾಗಿದೆ. ನಮ್ಮ ದೇಶದ ಬಡ ಮಕ್ಕಳು ಅನುಭವಿಸುವ ಸಂಕಷ್ಟಗಳ ಬಗ್ಗೆ ಅರಿವಿದೆ. ಈ ಕುರಿತು ನಾನು ಗಮನ ಹರಿಸುತ್ತೇನೆ", ಎಂದಿದ್ದಾರೆ.

ಪುಟ್ಟ ಭವ್ಯ ನೀಡಿರುವ ಹಣಕ್ಕೆ ಸಂಬಂಧಿಸಿದ ರಸೀದಿಯನ್ನು ಸಹ ಪತ್ರದ ಜತೆ ಲಗತ್ತಿಸಲಾಗಿದೆ. ತನ್ನ ಜನ್ಮದಿನದಂದು ಭವ್ಯ ತಾನು ಪಿಗ್ಗಿ ಬ್ಯಾಂಕ್‌ನಲ್ಲಿ ಉಳಿತಾಯ ಮಾಡಿದ್ದ ಹಣವನ್ನು  ಪ್ರಧಾನಿ ಮೋದಿಯವರಿಗೆ ಕಳುಹಿಸಿದ್ದ. ಫೆಬ್ರವರಿ 19 ರಂದು ಪ್ರಧಾನಿ ಕಚೇರಿಯಿಂದ ಪತ್ರವನ್ನು ಕಳುಹಿಸಲಾಗಿದೆ.

ವೆಬ್ದುನಿಯಾವನ್ನು ಓದಿ