ಪ್ರಧಾನಿ ನರೇಂದ್ರ ಮೋದಿ ಸೂಪರ್‌ಮ್ಯಾನ್‌ನಂತೆ ವರ್ತಿಸುತ್ತಿದ್ದಾರೆ: ತರುಣ್ ಗೊಗೈ

ಗುರುವಾರ, 25 ಫೆಬ್ರವರಿ 2016 (16:39 IST)
ಯುಪಿಎ ಸರಕಾರದ ಅವಧಿಯಲ್ಲಿ ಜಾರಿಗೆ ಬಂದ ಯೋಜನೆಗಳನ್ನು ತಾವೇ ಜಾರಿಗೊಳಿಸಿದ್ದಾಗಿ ಹೇಳಿ ಅದರ ಲಾಭ ಪಡೆಯಲು ಪ್ರಯತ್ನಿಸುತ್ತಿರುವ ಪ್ರದಾನಿ ನರೇಂದ್ರ ಮೋದಿ ಸೂಪರ್‌ಮ್ಯಾನ್‌ನಂತೆ ವರ್ತಿಸುತ್ತಿದ್ದಾರೆ ಎಂದು ಆಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೈ ವಾಗ್ದಾಳಿ ನಡೆಸಿದ್ದಾರೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪ್ರಧಾನಿ ಮೋದಿ 10 ಸಾವಿರ ಕೋಟಿ ವೆಚ್ಚದ ಅನಿಲ ಉತ್ಪಾದಕ ಘಟಕ ಸೇರಿದಂತೆ ಹಲವು ಯೋಜನೆಗಳನ್ನು ಉದ್ಘಾಟಿಸಿ ತಾವೇ ಜಾರಿಗೊಳಿಸಿದಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
 
ಪ್ರಧಾನಿ ಮೋದಿ ಕಳೆದ ಎರಡು ವರ್ಷಗಳಲ್ಲಿಯೇ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಿದಂತೆ ಜನತೆಯ ಮುಂದೆ ಬಿಂಬಿಸಿಕೊಳ್ಳುತ್ತಾ ತಾನೊಬ್ಬ ಸೂಪರ್‌ಮ್ಯಾನ್ ಎನ್ನುವಂತೆ ತೋರಿಸಿಕೊಳ್ಳುತ್ತಿದ್ದಾರೆ. ಆದರೆ, ಎಲ್ಲಾ ಯೋಜನೆಗಳು ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದಾಗಿವೆ ಎಂದು ತಿರುಗೇಟು ನೀಡಿದರು.
 
79 ವರ್ಷ ವಯಸ್ಸಿನ ಮುಖ್ಯಮಂತ್ರಿ ಗೊಗೈ ಮಾತನಾಡಿ, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರ್ ವಾಜಪೇಯಿಯವರಿಗೂ ಗೌರವ ಕೊಡಲು ಸಿದ್ದವಿಲ್ಲದ ಮೋದಿ, ಸೂಪರ್ ಮಾರ್ಕೆಟಿಂಗ್ ಮ್ಯಾನೇಜರ್‌ನಂತೆ ಎಂದು ಲೇವಡಿ ಮಾಡಿದ್ದಾರೆ.
 
ಇಂತಹ ವಂಚನೆಯ ಕಾರ್ಯಗಳು ಎಲ್ಲಾ ಸಂದರ್ಭದಲ್ಲಿಯೂ ನಡೆಯುವುದಿಲ್ಲ. ಬಿಹಾರ್‌ ರಾಜ್ಯದಲ್ಲಿ ಮೋದಿ ಮ್ಯಾಜಿಕ್ ನಡೆಯಲಿಲ್ಲ. ಅದರಂತೆ ಆಸ್ಸಾಂ ರಾಜ್ಯದಲ್ಲಿ ಮೋದಿ ಮ್ಯಾಜಿಕ್ ನಡೆಯುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎದುರಾಳಿ ಬಿಜೆಪಿ ಪಕ್ಷವನ್ನು ಸೋಲಿಸುವುದು ಖಚಿತ. ಬಿಜೆಪಿ ಸಿಎಂ ಅಭ್ಯರ್ಥಿ ಸರ್ಬಾನಂದ್ ಸೋನೋವಾಲ್ ನನಗೆ ಸರಿಸಮನಾದ ವ್ಯಕ್ತಿಯಲ್ಲ ಎಂದು ಮುಖ್ಯಮಂತ್ರಿ ತರುಣ್ ಗೊಗೈ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ