ದ್ವಿಪಕ್ಷೀಯ ಒಪ್ಪಂದ: ಪ್ರಧಾನಿ ಮೋದಿ, ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಮಾತುಕತೆ

ಸೋಮವಾರ, 5 ಅಕ್ಟೋಬರ್ 2015 (16:49 IST)
ಹೂಡಿಕೆ, ವ್ಯಾಪಾರ ಸೇರಿದಂತೆ ಹಲವಾರು ಮಹತ್ವದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜರ್ಮನಿ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ದ್ವಿಪಕ್ಷೀಯ ಸಹಕಾರ ಒಪ್ಪಂದ ಕುರಿತಂತೆ ಚರ್ಚೆ ನಡೆಸಿದ್ದಾರೆ. 
 
ಜರ್ಮನಿಯ ಚಾನ್ಸಲರ್ ಮಾರ್ಕೆಲ್ ತಮ್ಮೊಂದಿಗೆ ಸಂಪುಟದ ಸಚಿವರು ಮತ್ತು ಉನ್ನತ ಅಧಿಕಾರಿಗಳ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದು ಅವರಿಗೆ ರಾಷ್ಟ್ರಪತಿ ಭವನದಲ್ಲಿ ಭರ್ಜರಿ ಸ್ವಾಗತ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.  
 
ರಕ್ಷಣಾ, ಭದ್ರತೆ, ಶಿಕ್ಷಣ, ವ್ಯಾಪಾರ, ಹೂಡಿಕೆ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಭಾಗಿತ್ವದ ಬಗ್ಗೆ ಪ್ರಧಾನಿ ಮೋದಿ ಮತ್ತು ಮಾರ್ಕೆಲ್ ಚರ್ಚಿಸಿದ್ದಾರೆ ಎಂದು ಪ್ರಧಾನಿ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
 
ಪ್ರಧಾನಿ ಮೋದಿ ಮತ್ತು ಜರ್ಮನಿಯ ಚಾನ್ಸಲರ್ ಏಂಜೆಲಾ ಮಾರ್ಕೆಲ್ ನೇತೃತ್ವದಲ್ಲಿ 3ನೇ ಭಾರತ-ಜರ್ಮನಿ ದ್ವಿಪಕ್ಷೀಯ ಒಪ್ಪಂದ ಸಭೆ ಆರಂಭವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.  
 
ಕಳೆದ 2001ರಿಂದ ಭಾರತ ಮತ್ತು ಜರ್ಮನಿ ದೇಶಗಳು ಪರಸ್ಪರ ಸೌಹಾರ್ದಯುತ, ಸಹಬಾಳ್ವೆಯ ಪಾಲುದಾರ ದೇಶಗಳಾಗಿವೆ ಎಂದು ಸ್ವರೂಪ್ ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ