ಸ್ಮೃತಿ ಇರಾನಿ ನರೇಂದ್ರ ಮೋದಿ ಅಂಗಳದ ತುಳಸಿಯಂತೆ: ಕಾಂಗ್ರೆಸ್ ಲೇವಡಿ

ಶುಕ್ರವಾರ, 31 ಜುಲೈ 2015 (17:16 IST)
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗುರುದಾಸ್ ಕಾಮತ್ ಗುರುವಾರ ಪ್ರಧಾನಿ ಮೋದಿ ಮತ್ತು ಸಚಿವೆ ಸ್ಮೃತಿ ಇರಾನಿ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ್ದು, ಸ್ಮೃತಿ ಮೋದಿ ಅಂಗಳದ ತುಳಸಿ ಎಂದು ಅಣಕವಾಡಿದ್ದಾರೆ. 

'ಮುನ್ಸಿಪಲ್ ಚುನಾವಣೆ ಪ್ರಚಾರಾರ್ಥವಾಗಿ ರಾಜಸ್ಥಾನದ 5 ಜಿಲ್ಲೆಗಳಲ್ಲಿ 2 ದಿನದ ಪ್ರವಾಸ ನಡೆಸುತ್ತಿರುವ  ಕಾಮತ್  ಮಾನವ ಸಂಪನ್ಮೂಲ ಸಚಿವೆಯಾಗಲು ಸ್ಮೃತಿ ಇರಾನಿ ಯಾವ ಅರ್ಹತೆಯನ್ನು ಹೊಂದಿದ್ದಾರೆ', ಎಂದು ಪ್ರಶ್ನೆ ಹಾಕಿದ್ದಾರೆ. 
 
ರಾಜಸ್ಥಾನದ ಉಸ್ತುವಾರಿ ವಹಿಸಿಕೊಂಡಿರುವ ಕಾಮತ್, 'ಮೋದಿಯವರು ರೈತರ ಸಮಸ್ಯೆಗಳ ಕಡೆ ಗಮನ ಹರಿಸುವುದಕ್ಕಿಂತ ಟಿವಿ ಧಾರಾವಾಹಿಗಳನ್ನು ನೋಡುವುದರಲ್ಲಿಯೇ ಹೆಚ್ಚು ಆಸಕ್ತರಾಗಿದ್ದಾರೆ', ಎಂದು ವ್ಯಂಗ್ಯವಾಡಿದ್ದಾರೆ. 
 
ಭಿಲ್ವಾರಾದಲ್ಲಿ ನಿನ್ನೆ ಚುನಾವಣಾ ಪ್ರಚಾರ ನಡೆಸುತ್ತಿದ್ದ ಅವರು ಪ್ರಧಾನಿ ಮೋದಿಯವರು ಇರಾನಿಯವರನ್ನು ಮಾನವ ಸಂಪನ್ಮೂಲ ಸಚಿವೆಯನ್ನಾಗಿ ಆಯ್ಕೆ ಮಾಡಿದ್ದು ಏಕೆ ಎಂಬ ಪ್ರಶ್ನೆಯನ್ನೆತ್ತಿದರು. 
 
"ಇರಾನಿ ಕುಟುಂಬದ ಆರ್ಥಿಕ ಪರಿಸ್ಥತಿ ಬಹಳ ಕೆಟ್ಟದ್ದಾಗಿತ್ತು. ಆ ಕಾರಣಕ್ಕಾಗಿ ಅವರು ವೆರ್ಸೋವಾದ ಹೊಟೆಲ್‌ನಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಅವರು ಟೇಬಲ್ ಒರೆಸುವ ಕೆಲಸವನ್ನು ಮಾಡುತ್ತಿದ್ದರು", ಎಂದು ಕಾಮತ್ ಇರಾನಿ ವೈಯಕ್ತಿಕ ಬದುಕಿನ ಕುರಿತು ಮಾತನಾಡಿದ್ದಾರೆ.
 
"ಅನಕ್ಷರಸ್ಥರಾಗಿರುವ ಅವರಿಗೆ ಸಚಿವೆ ಪದವಿ ಪಡೆಯುವ ಅರ್ಹತೆ ಇಲ್ಲ. ಆದರೆ ಪ್ರಧಾನಿ ಮೋದಿಯವರು ಸ್ವ ಹಿತಾಸಕ್ತಿಯಿಂದ ಅವರನ್ನು ಸಚಿವೆ ಪದವಿಗೇರಿಸಿದ್ದಾರೆ", ಎಂದು ಕಾಮತ್ ಆರೋಪಿಸಿದ್ದಾರೆ. 
 
'ಬಿಜೆಪಿ ದೇಶದ ಆಡಳಿತ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ  ಮೋದಿಯವರು ಅವರನ್ನು ಮಂತ್ರಿ ಪದವಿಗೇರಿಸಿದರು. ನಿರಕ್ಷರಕುಕ್ಷಿ ಇರಾನಿ ಮೋದಿ ಅಂಗಳದ ತುಳಸಿ ಯಾದಳು', ಎಂದು ಕಾಮತ್ ಅಣಕವಾಡಿದ್ದಾರೆ.
 
ಅಷ್ಟೇ ಅಲ್ಲದೇ ಮೋದಿಯನ್ನು ಅವರು ಹಿಟ್ಲರ್‌ಗೆ ಹೋಲಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ