ಪ್ರತಿಯೊಂದು ವಿಷಯಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ: ವಿ.ಕೆ.ಸಿಂಗ್

ಸೋಮವಾರ, 29 ಜೂನ್ 2015 (18:58 IST)
ಲಲಿತ್ ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಮೌನವಾಗಿದ್ದಾರೆ ಎನ್ನುವ ಆರೋಪಗಳನ್ನು ತಲ್ಳಿಹಾಕಿದ ಕೇಂದ್ರ ಸಚಿವ ವಿ.ಕೆ.ಸಿಂಗ್, ಪ್ರತಿಯೊಂದಕ್ಕೂ ಪ್ರಧಾನಿ ಉತ್ತರ ನೀಡುವ ಅಗತ್ಯವಿಲ್ಲ. ಸಮಯ ಬಂದಾಗ ಅವರೇ ಉತ್ತರ ನೀಡುತ್ತಾರೆ ಎಂದು ಹೇಳಿದ್ದಾರೆ. 
 
ಲಲಿತ್ ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಲೇಬೇಕು ಎಂದು ಯಾಕೆ ಒತ್ತಾಯಿಸುತ್ತಿದ್ದೀರಾ? ಪ್ರತಿಯೊಂದು ವಿಷಯಕ್ಕೂ ಉತ್ತರಿಸುವುದು ಸೂಕ್ತವಲ್ಲ. ಖಾಸಗಿ ಚಾನೆಲ್‌ನಲ್ಲಿ ಯಾವುದೋ ಸುದ್ದಿ ಬರುತ್ತಿರುತ್ತದೆ. ಅಂತಹ ಸುದ್ದಿಗಳಿಗೆಲ್ಲಾ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತದೆಯೇ ಎಂದು ತಿರುಗೇಟು ನೀಡಿದ್ದಾರೆ.
 
ಕೇಂದ್ರ ವಿದೇಶಾಂಗ ಸಚಿವಾಲಯ ಆರ್‌ಟಿಐ ಮಾಹಿತಿ ಪಡೆಯುವುದನ್ನು ತಡೆಹಿಡಿದಿದೆ ಎನ್ನುವ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆರ್‌ಟಿಐ ಇಲಾಖೆಯಲ್ಲ ಕೆಲ ನಿಯಮಗಳಿರುತ್ತವೆ. ಅದರಂತೆ ಸಂಬಂಧಪಟ್ಟ ಸಚಿವರು ಹೇಳಿಕೆ ನೀಡಿರುತ್ತಾರೆ ಎಂದರು.
 
ಟೀಕಾಕಾರರು ಸದಾ ಟೀಕಿಸುತ್ತಿರುತ್ತಾರೆ. ಆದ್ದರಿಂದ ಅನಗತ್ಯ ವಿಷಯಗಳಿಗೆಲ್ಲಾ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಇಂತಹ ವಿಷಯಗಳಿಗೆ  ಯಾವುದೇ ಆಧಾರವಿರುವುದಿಲ್ಲ ಎಂದು ಹೇಳಿದ್ದಾರೆ.
 
ಕೆಲ ಖಾಸಗಿ ಚಾನೆಲ್‌ಗಳು ಕಳೆದ 15 ದಿನಗಳಿಂದ ಲಲಿತ್ ಮೋದಿ ಪ್ರಕರಣವನ್ನು ಬಿತ್ತರಿಸುತ್ತಿವೆ. ಅವರಿಗೆ ಸುದ್ದಿಯನ್ನು ಬಿತ್ತರಿಸುವ ಗುತ್ತಿಗೆ ಕೊಟ್ಟಿದ್ದಾದರೂ ಯಾರು?  ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್ ಪ್ರಶ್ನಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ