ಭಾರತೀಯ ವಾಯುಪಡೆಗೆ 83ನೇ ವಾರ್ಷಿಕೋತ್ಸವ: ಮೋದಿ ಶುಭಾಶಯ

ಗುರುವಾರ, 8 ಅಕ್ಟೋಬರ್ 2015 (14:20 IST)
83ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಭಾರತೀಯ ವಾಯು ಪಡೆಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ದೇಶದ ಹಿತ ಕಾಪಾಡುವಲ್ಲಿ ಭಾರತೀಯ ವಾಯು ದಳದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
 
"ವಾಯುಪಡೆ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ನಾನು ಏರ್ ಫೋರ್ಸ್ ಯೋಧರಿಗೆ ವಂದಿಸುತ್ತೇನೆ. ಮಹಾನ್ ಧೈರ್ಯ ಮತ್ತು ಸಂಕಲ್ಪದೊಂದಿಗೆ ಅವರು ದೇಶವನ್ನು ಕಾಯುತ್ತಾರೆ. ನಮ್ಮ ವಾಯುಪಡೆಯ ಕೊಡುಗೆ ಸದಾ ಸ್ಮರಣೀಯಾದುದು. ದೇಶವನ್ನು ಕಾಯುವುದರಷ್ಟೇ ಅಲ್ಲದೆ ಪ್ರಕೃತಿ ವಿಕೋಪ ಸಂಭವಿಸಿದ ಸ್ಥಳಗಳಲ್ಲಿ ಪರಿಹಾರ ಕೈಗೊಳ್ಳುವುದು ಸೇರಿದಂತೆ ತುರ್ತು ಪರಿಸ್ಥಿತಿಯಲ್ಲಿ ಅವರು ಸದಾ ಮುಂಚೂಣಿಯಲ್ಲಿರುತ್ತಾರೆ", ಎಂದು ಮೋದಿ ತಮ್ಮ ಸರಣಿ ಟ್ವೀಟ್‌ಗಳಲ್ಲಿ ವಾಯುಪಡೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
 
ಗಾಜಿಯಾಬಾದ್‌ನಲ್ಲಿ ವಾಯುಪಡೆಯ ವಾರ್ಷಿಕೋತ್ಸವ ಸಮಾರಂಭವನ್ನು ಆಯೋಜಿಸಲಾಗಿದ್ದು ಭಾರತ ಕ್ರಿಕೆಟ್‌ನ ದಂತಕಥೆ ಸಚಿನ್‌ ತೆಂಡೂಲ್ಕರ್ ಸಹ ಭಾಗವಹಿಸಿದ್ದಾರೆ. ಭಾರತೀಯ ವಾಯುಪಡೆಯಲ್ಲಿ 'ಗೌರವ ಗ್ರೂಪ್ ಕ್ಯಾಪ್ಟನ್' ಎನಿಸಿಕೊಂಡ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆ ಅವರಿಗಿದೆ.
 
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಮತ್ತು ನೌಕಾ ಸೇನಾ ವರಿಷ್ಠ ಆರ್.ಕೆ. ಧೋವನ್ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದಾರೆ.
 
'ಅಕ್ಟೋಬರ್‌ 8 1932', ರಂದು ನಮ್ಮ ಹೆಮ್ಮೆಯ ವಾಯು ಪಡೆ ಅಸ್ತಿತ್ವಕ್ಕೆ ಬಂದಿತ್ತು. ಆ ಸಂದರ್ಭದಲ್ಲಿ ದೇಶದಲ್ಲಿ ಬ್ರಿಟಿಷ್ ಆಳ್ವಿಕೆ ಇತ್ತು. ಜಗತ್ತಿನ ಅತೀ ದೊಡ್ಡ ವಾಯುಪಡೆಗಳಲ್ಲಿ ಒಂದಾಗಿರುವ ಭಾರತೀಯ ವಾಯುದಳದಲ್ಲಿ 1,70,000ಕ್ಕೂ ಹೆಚ್ಚಿನ ಸಿಬ್ಬಂದಿ ಹಾಗೂ 1500ಕ್ಕೂ ಹೆಚ್ಚು ಯುದ್ಧ ವಿಮಾನಗಳಿವೆ. 

ವೆಬ್ದುನಿಯಾವನ್ನು ಓದಿ