ದೆಹಲಿ ತಲುಪಿದ ಕಲಾಂ ಪಾರ್ಥಿವ ಶರೀರ: ಬರ ಮಾಡಿಕೊಂಡ ರಾಷ್ಟ್ರಪತಿ, ಪ್ರಧಾನಿ

ಮಂಗಳವಾರ, 28 ಜುಲೈ 2015 (12:36 IST)
ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪುರಸ್ಕೃತ, ಖ್ಯಾತ ವಿಜ್ಞಾನಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರ 12. 15ಕ್ಕೆ ನವದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ತಲುಪಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರಾದ ರಾಜನಾಥ್ ಸಿಂಗ್, ರಕ್ಷಣಾ ಸಚಿವರಾದ ಮನೋಹರ ಪರಿಕ್ಕರ್ ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರವನ್ನು ಸ್ವೀಕರಿಸಿದ್ದಾರೆ. 

ವಾಯುಪಡೆಯ ವಿಶೇಷ ವಿಮಾನದಲ್ಲಿ ಅವರ ಶರೀರವನ್ನು ಗುವಾಹಟಿಯಿಂದ ನವದೆಹಲಿ ತರಲಾಯಿತು. ವಿಮಾನ ನಿಲ್ದಾಣಕ್ಕೆ ಶರೀರವನ್ನು ತರುತ್ತಿದ್ದಂತೆ ಭೂ ಸೇನೆ, ವಾಯುಸೇನೆ ಮತ್ತು, ನೌಕಾ ಸೇನೆಯ ಮುಖ್ಯಸ್ಥರು, ಸೇನಾಪಡೆ ಅವರಿಗೆ ಗೌರವ ವಂದನೆಯನ್ನು ಸಲ್ಲಿಸಿದರು.

ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮೋದಿ, ರಕ್ಷಣಾ ಸಚಿವರಾದ ಪರಿಕ್ಕರ್, ದೆಹಲಿ ಸಿಎಂ ಕೇಜ್ರಿವಾಲ್, ಉಪರಾಜ್ಯಪಾಲ, ನಜೀಬ್ ಜಂಗ್ ಸೇರಿದಂತೆ ಪ್ರಮುಖ ಗಣ್ಯರು ಅಗಲಿದ ಧೀಮಂತನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. 
 
ಇಲ್ಲಿಂದ ಪಾರ್ಥಿವ ಶರೀರವನ್ನು ನಂ10, ರಾಜಾಜಿ  ಮಾರ್ಗದಲ್ಲಿರುವ ನಿವಾಸಕ್ಕೆ ಕೊಂಡೊಯ್ಯಲಾಗುವುದು. ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕಿಡಲಾಗುವುದು. 
 
ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಅವರ ಪಾರ್ಥಿವ ಶರೀರವನ್ನು ರಾಮೇಶ್ವರಂಗೆ ಕೊಂಡೊಯ್ಯಲಾಗುವುದು. ನಾಳೆ ಅವರ ಅಂತ್ಯಸಂಸ್ಕಾರವನ್ನು ನಡೆಸಲಾಗುವುದು ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಪ್ರಮುಖ ಮಂತ್ರಿಗಳು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ. 
 
2002ರಿಂದ 2007ರ ವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ ಮಹಾನ್ ವಿಜ್ಞಾನಿ ಕಲಾಂ ನಿನ್ನೆ ಮೆಘಾಲಯದ ಐಐಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು.

ವೆಬ್ದುನಿಯಾವನ್ನು ಓದಿ