ಯೋಧ ಹನುಮಂತಪ್ಪ ಭೇಟಿ ಮಾಡಿದ ಪ್ರಧಾನಿ ಮೋದಿ

ಮಂಗಳವಾರ, 9 ಫೆಬ್ರವರಿ 2016 (15:55 IST)
ಸಿಯಾಚಿನ್‌ ಹಿಮಪಾತದಲ್ಲಿ ಪವಾಡಸದೃಶ ರೀತಿಯಲ್ಲಿ ಬದುಕುಳಿದಿರುವ ರಾಜ್ಯದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರನ್ನು ಪ್ರಧಾನಿ ಮೋದಿ ಮತ್ತು ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್‌ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. 


 
ಗಂಭೀರ ಸ್ಥಿತಿಯಲ್ಲಿರುವ ಯೋಧನನ್ನು ನವದೆಹಲಿಯ ಆರ್‌ಆರ್ ಸೇನಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ವಿಶೇಷ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ.  ಆಸ್ಪತ್ರೆಗೆ ಆಗಮಿಸಿದ್ದ ಮೋದಿಯವರು ಹನುಮಂತಪ್ಪ ಅವರ ಆತ್ಮಸ್ಥೈರ್ಯ ಮತ್ತು ಚೈತನ್ಯವನ್ನು ವಿವರಿಸಲು ಪದಗಳೇ ಸಿಗುತ್ತಿಲ್ಲ. ಅವರೊಬ್ಬ ಮಹೋನ್ನತ ಸೈನಿಕ. ಬಹುಬೇಗ ಚೇತರಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನಮಗಿದೆ. ಅವರು ಬೇಗ ಗುಣಮುಖರಾಗಲಿ.ಸಂಪೂರ್ಣ ದೇಶ ಅವರೊಂದಿಗಿದೆ ಎಂದು ಹೇಳಿದ್ದಾರೆ.
 
ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ 'ಯೋಧ ಬಹು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ, ನನ್ನ ಹಾರೈಕೆ ಅವರಿಗೆ ಇದೆ' ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಯೋಧನ ಕುಟುಂಬ ಸಹ ದೆಹಲಿಗೆ ಪ್ರಯಾಣ ಬೆಳೆಸಿದೆ. 
 
ಕಳೆದ 6 ದಿನಗಳ ಹಿಂದೆ ಸಂಭವಿಸಿದ ಹಿಮಪಾತದಲ್ಲಿ ಕರ್ನಾಟಕದ ಮೂವರು ಸೇರಿದಂತೆ 10 ಯೋಧರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಮೃತರಾಗಿದ್ದಾರೆನ್ನಲಾಗಿದ್ದ ಹನುಮಂತಪ್ಪ ನಿನ್ನೆ ರಾತ್ರಿ ಜೀವಂತವಾಗಿ ಪತ್ತೆಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ