ಅಮೀರ್ ಖಾನ್ ಅಸಹಿಷ್ಣುತೆ ಹೇಳಿಕೆ: ದೆಹಲಿಯಲ್ಲಿ ದೂರು ದಾಖಲು

ಮಂಗಳವಾರ, 24 ನವೆಂಬರ್ 2015 (18:51 IST)
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧ ಧಾರವಾಹಿಗಳ ನಿರ್ಮಾಪಕ ಉಲ್ಲಾಸ್ ಪಿಆರ್ ನ್ಯೂ ಅಶೋಕ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
 
ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಲ್ಲಾಸ್, ನಮಗೆ ಕೆಲವು ಮೂಲಭೂತವಾದ ಕರ್ತವ್ಯಗಳಿವೆ. ದೇಶದಲ್ಲಿ ಶಾಂತಿ, ಸಾಮರಸ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಮೂಲ ಕರ್ತವ್ಯವಾಗಿದೆ. ಸೆಲೆಬ್ರಿಟಿಗಳು ಇಂತಹ ಹೇಳಿಕೆ ನೀಡುವಾಗ ಯಾವ ಸಮುದಾಯದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಬೇಕು ಮತ್ತು ದೇಶದ ಯಾವ ಭಾಗದಲ್ಲಿ ಜನತೆ ಆತಂಕದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ. 
 
ಈ ಹಿಂದೆ ಪಿಕೆ ಚಿತ್ರದಲ್ಲಿ ಪೊಲೀಸರನ್ನು ಠುಲ್ಲಾ ಎಂದು ಉಪನಾಮ ಬಳಸಿದ್ದರಿಂದ ಪಿಕೆ ಚಿತ್ರದ ನಟ ನಿರ್ಮಾಪಕರ ವಿರುದ್ಧ ಉಲ್ಲಾಸ್ ದೂರು ದಾಖಲಿಸಿದ್ದರು.
 
ಸೆಲೆಬ್ರಿಟಿಗಳು ಇಂತಹ ಹೇಳಿಕೆಗಳನ್ನು ನೀಡುವ ಮುನ್ನ ತಮ್ಮ ಸ್ಥಾನಮಾನ ಮತ್ತು ಕರ್ತವ್ಯಗಳ ಬಗ್ಗೆ ಚಿಂತಿಸಬೇಕು. ಒಂದು ವೇಳೆ, ಅವರಿಗೆ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ಸಾಧ್ಯವಾಗದಿದ್ದಲ್ಲಿ, ಅಸಹಿಷ್ಣುತೆ ಮತ್ತು ಇತರ ವಿಷಯಗಳ ಬಗ್ಗೆ ಹೇಳಿಕೆ ನೀಡಿ ಜನತೆಯಲ್ಲಿ ಆತಂಕ ಸೃಷ್ಟಿಸಬಾರದು ಎಂದರು.  
 
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಮೀರ್ ಖಾನ್, ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ. ನನ್ನ ಪತ್ನಿ ಕಿರಣ್ ರಾವ್ ತನ್ನ ಮಗುವಿನ ಸುರಕ್ಷತೆ ಬಗ್ಗೆ ಆತಂಕಗೊಂಡಿದ್ದಾಳೆ. ಬೆಳಿಗ್ಗೆ ನ್ಯೂಸ್‌ಪೇಪರ್ ತೆಗೆದು ನೋಡಲು ಕೂಡಾ ಹೆದರುತ್ತಾಳೆ ಎಂದು ಹೇಳಿಕೆ ನೀಡಿದ್ದರು. 

ವೆಬ್ದುನಿಯಾವನ್ನು ಓದಿ