ಪುಷ್ಕರ್ ಅನುಮಾನಾಸ್ಪದ ಸಾವು: ತರೂರ್‌ಗೆ ಸುಳ್ಳು ಪತ್ತೆ ಪರೀಕ್ಷೆ ಸಾಧ್ಯತೆ

ಬುಧವಾರ, 1 ಜುಲೈ 2015 (11:13 IST)
ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣ ಕುರಿತಂತೆ ಅವರ ಪತಿ, ಮಾಜಿ  ಕೇಂದ್ರ ಸಚಿವ,  ಶಶಿ ತರೂರ್‌ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ. 

ಈ ಕುರಿತು ಕೋರ್ಟ್ ಅನುಮತಿ ಪಡೆಯುವುದರ ಕುರಿತಂತೆ ಅಂತಿಮ ತೀರ್ಮಾನಕ್ಕಾಗಿ ವಿಶೇಷ ತನಿಖಾ ದಳದ ಪೊಲೀಸರು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಶಶಿ ತರೂರ್ ಅವರಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಪೊಲೀಸರು ಕೋರ್ಟ್‌ನಲ್ಲಿ ಅನುಮತಿ ಪಡೆಯುವುದು ಅವಶ್ಯ.
 
ಸುನಂದಾ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ತರೂರ್ ಕುಟುಂಬದ ಆಪ್ತ ಸಂಜಯ್ ದೇವನ್, ಮನೆ ಕೆಲಸದ ಆಳು ನಾರಾಯಣ ಸಿಂಗ್, ಚಾಲಕ ಭಜರಂಗಿ ಸೇರಿದಂತೆ ಆರು ಜನರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. 
 
'ತನಿಖೆಗೆ ಸಂಬಂಧಿಸಿದಂತೆ ಎಲ್ಲ ರೀತಿಯಲ್ಲಿ ಸಹಕರಿಸುವುದಾಗಿ ಶಶಿ ಥರೂರ್ ಈಗಾಗಲೇ ಹೇಳಿದ್ದಾರೆ. ಆದರೆ ಸುಳ್ಳು ಪತ್ತೆ ಪರೀಕ್ಷೆ  ಕುರಿತಂತೆ ಪೊಲೀಸರು ಅಧಿಕೃತವಾಗಿ ಮನವಿಯನ್ನು ಕಳುಹಿಸಿಲ್ಲ', ಎಂದು ಅವರ ಕಚೇರಿ ಮೂಲಗಳು ಸ್ಪಷ್ಟ ಪಡಿಸಿವೆ. 
 
ಸುನಂದಾ ಪುಷ್ಕರ್ (51), ಜನೇವರಿ 2014ರಲ್ಲಿ  ನವದೆಹಲಿಯ ಲೀಲಾ ಪ್ಯಾಲೆಸ್ ಹೊಟೆಲ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಈ ಕುರಿತು ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 
 
ಆಕೆಯ ದೇಹದಲ್ಲಿ ಯಾವ ರೀತಿಯ ವಿಷ ಸೇರಿದೆ ಎಂಬುದನ್ನು ಕಂಡುಕೊಳ್ಳಲು ಅಮೇರಿಕಾದ ಎಫ್‌ಬಿಐ ಲ್ಯಾಬ್‌ಗೆ ದೆಹಲಿ ಪೊಲೀಸರು ಪುಷ್ಕರ್ ಅಂಗಾಂಗಳನ್ನು ಕಳುಹಿಸಿದ್ದು ವರದಿಗಾಗಿ ಕಾಯುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ