ಫೇಸ್‌ಬುಕ್‌ನಲ್ಲಿ ತನ್ನನ್ನು ತಾನೇ ಮಾರಾಟಕ್ಕಿಟ್ಟ ಯುವತಿ..

ಶುಕ್ರವಾರ, 28 ನವೆಂಬರ್ 2014 (10:28 IST)
ಬಡತನಕ್ಕೆ ಬೆದರಿ ಹೆತ್ತ ಮಕ್ಕಳನ್ನು, ದೇಹದ ಅಂಗಗಳನ್ನು ಮಾರಾಟಕ್ಕಿಟ್ಟ ಘಟನೆಗಳನ್ನು ನೀವು ಓದೇ ಇರುತ್ತಿರಿ. ಆದರೆ ಇಲ್ಲೊಬ್ಬಳು ಯವತಿ ಸುಡುತ್ತಿರುವ ದಾರಿದ್ರ್ಯಕ್ಕೆ ಬಸವಳಿದು ತನ್ನನ್ನೇ ತಾನೇ ಮಾರಾಟಕ್ಕಿಟ್ಟಿದ್ದಾಳೆ ಎಂದರೆ..... ಅದು ಕೂಡ ಸಾಮಾಜಿಕ ಜಾಲತಾಣ ಫೇಸ್‌ಬುಕ್  ಮೂಲಕ.

ಇಡೀ ದೇಶವೇ ತಲೆತಗ್ಗಿಸುವಂತ ಈ ಘಟನೆ ನಡೆದಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ತವರು ವಡೋದರಾದಲ್ಲಿ. ಬಡ ಯುವತಿ  ಚಾಂದನಿಗೆ ಬಡತನ ಎಷ್ಟರ ಮಟ್ಟಿಗೆ ಬಾಧಿಸಿದೆ ಎಂದರೆ ಬದುಕಲು ದಾರಿ ಕಾಣದ ಆಕೆ  ತನ್ನನ್ನು ತಾನೇ ಮಾರಾಟಕ್ಕಿಟ್ಟಿದ್ದಾಳೆ.. ಹೌದು, ಹಣಕ್ಕಾಗಿ ಚಾಂದನಿ ಫೇಸ್‌ಬುಕ್ ಮೂಲ ತನ್ನನ್ನೇ ಮಾರಿಕೊಳ್ಳಲು ಮುಂದಾಗಿದ್ದಾಳೆ. 
 
ಪರಿವಾರವನ್ನು ಹುರಿದು ನುಂಗುತ್ತಿರುವ ಬಡತನ. ಒಂದೊಂದು ತುತ್ತಿಗಾಗಿ ಪರದಾಟ. ಹೆತ್ತವರ ದಯನೀಯ ಸ್ಥಿತಿ ನೋಡಲಾಗದೇ  ನೊಂದಿರುವ ಚಾಂದನಿ  ಫೇಸ್‌ಬುಕ್‌ನಲ್ಲಿ 'ನಾನು ಮಾರಾಟಕ್ಕಿದ್ದಿನಿ' ಎಂದು ಪೋಸ್ಟ್ ಹಾಕಿದ್ದಾಳೆ. ಅವಳ ಈ ಕೆಟ್ಟ ಪರಿಸ್ಥಿತಿಯನ್ನು ಅವಳದೇ ಪದಗಳಲ್ಲಿ ಓದಿ...
 
‘ನನ್ನ ಹೆಸರು ಚಾಂದನಿ ರಾಜ್’​​ಗೌರ್​​​. ನನ್ನ ಅಮ್ಮನಿಗೆ ಲಕ್ವಾ ಹೊಡೆದಿದೆ. ಮನೆ ನಡೆಸುತ್ತಿದ್ದ ತಂದೆ ಕೆಲ ದಿನಗಳ ಹಿಂದೆ ಅಪಘಾತಕ್ಕೊಳಗಾಗಿದ್ದಾರೆ. ಇಬ್ಬರೂ ಹಾಸಿಗೆ ಹಿಡಿದಿದ್ದು, ಅವರ ಚಿಕಿತ್ಸೆಗೆ, ಆರೈಕೆಗೆ ಮತ್ತು ಹೊಟ್ಟೆಗೆ ತಿನ್ನಲು ನನ್ನ ಬಳಿ ಕೆಲಸ, ಹಣ, ಆಸ್ತಿ ಏನೂ ಇಲ್ಲ. ನಮಗೆ ಯಾರ ಬೆಂಬಲ, ಸಹಾಯವೂ ಇಲ್ಲ . ಬೇರೆ ದಾರಿ ಕಾಣುತ್ತಿಲ್ಲ. ಹಾಗಾಗಿ  ನಾನು ನನ್ನನ್ನೇ ಮಾರಾಟಕ್ಕಿಟ್ಟಿದ್ದೇನೆ. ಖರೀದಿಸಲು ಇಚ್ಛಿಸುವವರು ಸಂಪರ್ಕಿಸಿ’-  ಚಾಂದನಿ
 
ನಾಚಿಕೆಗೇಡಿನ ಸಂಗತಿ ಎಂದರೆ ಅವಳ ಈ ಪೋಸ್ಟಿಂಗ್ ನೋಡಿದ ಹಲವರು ಆಕೆಯನ್ನು ಬಳಸಿಕೊಳ್ಳಲು ಯತ್ನಿಸಿದ್ದಾರೆ ಹೊರತು ಯಾರು ಕೂಡ ಮಾನವೀಯತೆಯ ಹಸ್ತ ಚಾಚಿಲ್ಲ. 
 
ಆದರೆ ಸಮಾಧಾನದ ವಿಷಯವೇನೆಂದರೆ ಚಾಂದನಿಯ ದುಃಸ್ಥಿತಿಗೆ ಸ್ಪಂದಿಸಿರುವ ಗುಜರಾತ್​​ ಮಹಿಳಾ ಆಯೋಗ ಆಕೆಗೆ ಅಗತ್ಯ ಸಹಾಯ ಮಾಡುವುದಾಗಿ ತಿಳಿಸಿದೆ. 
 
ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಗುಜರಾತ್ ರಾಜ್ಯ ಮಹಿಳಾ  ಆಯೋಗದ ಅಧ್ಯಕ್ಷೆ  ಲೀಲಾಬೆನನ್ ಅಂಕೋಲಿಯಾ ಗುಜರಾತ್ ಸಿವಿಲ್ ಆಸ್ಪತ್ರೆಯಿಂದ  ಆಕೆಯ ಪಾಲಕರಿಗೆ ಅಗತ್ಯ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದೇವೆ ಮತ್ತು ಆಕೆಗೆ ಇನ್ಯಾವುದೇ ರೀತಿಯ ಸಹಾಯ ನೀಡಲು ನಾವು ಸದಾ ಸಿದ್ಧ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ