ನೆಹರು, ಪಟೇಲ್, ಸುಭಾಷ್ ಚಂದ್ರಭೋಸ್‌ರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದಾರೆ: ಸಚಿವ ಪ್ರಕಾಶ್ ಜಾವ್ಡೇಕರ್ ಅಜ್ಞಾನ

ಮಂಗಳವಾರ, 23 ಆಗಸ್ಟ್ 2016 (14:21 IST)
ಕೇಂದ್ರದ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಇತಿಹಾಸವನ್ನು ಮತ್ತೆ ಬರೆದಿದ್ದಾರೆ ಎಂದು ಕಾಣುತ್ತದೆ! 
 
ಮಧ್ಯಪ್ರದೇಶದ ಚಿಂದವಾರ್‌ನಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಮಾಜಿ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಹುತಾತ್ಮರಾಗಿದ್ದಾರೆ ಎಂದು ಹೇಳಿ ಆಘಾತ ಮೂಡಿಸಿದ್ದಾರೆ. 
 
ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ನೆಹರು ಮತ್ತು ಸರ್ದಾರ್ ಪಟೇಲರನ್ನು ಗಲ್ಲಿಗೇರಿಸಲಾಯಿತು ಎಂದು ಹೇಳಿಕೆ ನೀಡಿ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ.
 
ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವ ಜಾವ್ಡೇಕರ್, ನೇತಾಜಿ ಸುಭಾಷಚಂದ್ರ ಭೋಸ್‌ರನ್ನು ಕೂಡಾ ಬ್ರಿಟಿಷರು ಗಲ್ಲಿಗೇರಿಸಿದ್ದರು ಎಂದು ಹೇಳಿಕೆ ನೀಡಿ ಹೊಸ ಇತಿಹಾಸ ಬರೆದಿದ್ದಾರೆ.
 
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು 1964ರಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರೆ, ಸರ್ದಾರ್ ಪಟೇಲರು 1950ರಲ್ಲಿ ನಿಧನ ಹೊಂದಿದ್ದರು. ಆದರೆ, ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಜಾವ್ಡೇಕರ್ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲವೆಬ್ಬಿಸಿದ್ದರೆ, ವಿಪಕ್ಷಗಳಿಗೆ ಸರಕಾರವನ್ನು ಹಣಿಯಲು ಹೊಸ ಅಸ್ತ್ರ ದೊರೆತಂತಾಗಿದೆ.
 
ಅದಕ್ಕಿಂತ ಹೆಚ್ಚಾಗಿ, ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಸಾವಿನ ಸತ್ಯ ಸಂಗತಿ ಬಹಿರಂಗವಾಗಿಲ್ಲ. ಆದರೆ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದಾರೆ ಎಂದು ಹೇಳಿಕೆ ನೀಡಿದ ಸಚಿವ ಜಾವ್ಡೇಕರ್ ಅಜ್ಞಾನಕ್ಕೆ ದೇಶಧ ಜ್ಞಾನಿಗಳು ಕಂಗಾಲಾಗಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ