ಸುಗ್ರೀವಾಜ್ಞೆ ಜಾರಿ ಪ್ರಜಾಪ್ರಭುತ್ವದಲ್ಲಿ ಒಳ್ಳೆಯದಲ್ಲ: ಕೇಂದ್ರದ ವಿರುದ್ಧ ಪ್ರಣಬ್ ಗರಂ

ಸೋಮವಾರ, 26 ಜನವರಿ 2015 (11:25 IST)
ಯಾವುದೇ ವಿಧೇಯಕವನ್ನು ವಿಸ್ತೃತವಾಗಿ ಚರ್ಚಿಸದೆ ಸುಗ್ರೀವಾಜ್ಞೆ ಜಾರಿಗೊಳಿಸುವುದರಿಂದ ಸರ್ಕಾರದ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ಇದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯದಲ್ಲ ಎಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಮತ್ತೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
 
66ನೇ ಗಣರಾಜ್ಯೋತ್ಸವ ಮುನ್ನಾದಿನ ದೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್‌, ಇತ್ತೀಚೆಗೆ ಹಲವು ಸುಗ್ರೀವಾಜ್ಞೆಗಳನ್ನು ಹೊರಡಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ರೂಪದ ಸಲಹೆ ನೀಡಿದ್ದಾರೆ. ಕಳೆದ ಮೂರು ದಶಕಗಳ ಬಳಿಕ ಪಕ್ಷವೊಂದಕ್ಕೆ ಪೂರ್ಣ ಬಹುಮತ ಸಿಕ್ಕಿದ್ದು, ಬಹುಮತದ ಸರ್ಕಾರವಿದೆ. ದೇಶದ ಜನತೆ ಶುದ್ಧ, ಸಮರ್ಥ, ಪರಿಣಾಮಕಾರಿ, ಪಾರದರ್ಶಕ, ಜನ ಸ್ನೇಹಿ ಆಡಳಿತಕ್ಕೆ ಮತ ನೀಡಿದ್ದು ಇಂತಹ ಸಂದರ್ಭದಲ್ಲಿ ಅವರ ವಿಶ್ವಾಸವನ್ನು ಕಾಯ್ದುಕೊಳ್ಳುವುದು ಕರ್ತವ್ಯವಾಗಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.
 
ವಿಧೇಯಕಗಳನ್ನು ಸೂಕ್ತವಾಗಿ ಪರಸ್ಪರ ಚರ್ಚಿಸಿ, ಜಾರಿಗೊಳಿಸುವ ಪ್ರಕ್ರಿಯೆ ಉತ್ತಮವಾದದ್ದು, ಇದರಿಂದ ಜನತೆಯ ಆಶೋತ್ತರಗಳಿಗೆ ಮನ್ನಣೆ ದೊರಕುತ್ತದೆ. ಅಲ್ಲದೇ ಜನರ ಪ್ರತಿನಿಧಿಗಳೇ ಆದ ಶಾಸಕಾಂಗ ಸದಸ್ಯರಲ್ಲಿನ ವ್ಯತ್ಯಾಸಗಳನ್ನು ಸೂಕ್ತವಾಗಿ ಪರಿಹರಿಸಿ ವಿಧೇಯಕ ಅಂಗೀಕರಿಸುವುದು ಹೆಚ್ಚು ಪರಿಣಾಮಕಾರಿಯಾದದ್ದು. ಯಾವುದೇ ಚರ್ಚೆಯಿಲ್ಲದೇ, ಸಂಸತ್ತಿನಲ್ಲಿ ಕಾಯ್ದೆ ಅಂಗೀಕರಿಸುವುದು ಸಂಸತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇದು ಜನರಿಟ್ಟ ವಿಶ್ವಾಸಕ್ಕೆ ಧಕ್ಕೆ ತರುತ್ತದೆ. ಇದು ಪ್ರಜಾಪ್ರಭುತ್ವಕ್ಕೂ ಒಳ್ಳೆಯದಲ್ಲ, ಸರ್ಕಾರದ ನೀತಿ, ಕಾಯ್ದೆಗಳಿಗೂ ಒಳ್ಳೆಯದಲ್ಲ ಎಂದವರು ಹೇಳಿದರು. ಈ ಹಿಂದೆಯೂ ಇದೇ ಮಾತನ್ನು ಉಚ್ಚರಿಸಿದ್ದ ಪ್ರಣಬ್‌, ಅತ್ಯಂತ ಅಗತ್ಯದ ವಿಶೇಷವಾದ ಸಂದರ್ಭದಲ್ಲಿ ಮಾತ್ರ ಸುಗ್ರೀವಾಜ್ಞೆ ಹೊರಡಿಸುವುದು ಸಾಧುವಾದ ಕ್ರಮವಾಗಿದೆ ಎಂದು ಹೇಳಿದ್ದರು.
 
ಇದೇ ವೇಳೆ ಭಯೋತ್ಪಾದನೆ ಕುರಿತಂತೆಯೂ ಮಾತನಾಡಿದ ರಾಷ್ಟ್ರಪತಿಯವರು, ದೇಶದ ಜನತೆ ವಿರುದ್ಧದ ಯುದ್ಧದಲ್ಲಿ ಗೆಲುವ ವಿಶ್ವಾಸವಿದೆ. ಅಲ್ಲದೇ ಗಡಿ ನಿಯಂತ್ರಣ ರೇಖೆಯಲ್ಲಿನ ಪದೇಪದೇ ಉಲ್ಲಂಘನೆ, ಭಯೋತ್ಪಾದನೆಗಳ ವಿರುದ್ಧ ರಾಜತಾಂತ್ರಿಕ, ಅಗತ್ಯ ಭದ್ರತಾ ಕ್ರಮಗಳ ಮೂಲಕ ಮಟ್ಟಹಾಕಬೇಕಿದೆ. ಈ ವಿಚಾರದಲ್ಲಿ ವಿಶ್ವದ ವಿವಿಧ ರಾಷ್ಟ್ರಗಳೂ ಭಾರತದ ಭಯೋತ್ಪಾದನಾ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಬೇಕಿದೆ ಎಂದು ಹೇಳಿದರು.
 
ದೇಶದ ಆರ್ಥಿಕತೆ ಸುಧಾರಣೆಯತ್ತ ಸಾಗುತ್ತಿರುವುದನ್ನೂ ಈ ವೇಳೆ ಬೊಟ್ಟು ಮಾಡಿದ ರಾಷ್ಟ್ರಪತಿಯವರು, ಪ್ರಸಕ್ತ ಆರ್ಥಿಕ ವರ್ಷದ ಮೊದಲೆರಡು ತ್ತೈಮಾಸಿಕದ ಅಭಿವೃದ್ಧಿ ದರ ಚೇತೋಹಾರಿಯಾಗಿದೆ. ಶೇ.7-8ರಷ್ಟು ಬೆಳವಣಿಗೆ ದಾಖಲಾಗಿರುವುದು ಉತ್ತಮ ಅಂಶ ಎಂದು ಬಣ್ಣಿಸಿದರು. ತಂತ್ರಜ್ಞಾನ, ವಿಜ್ಞಾನದ ಬಳಕೆಯಲ್ಲೂ ನಾವು ಮುಂದಿರಬೇಕಿದೆ. ಇದಕ್ಕಾಗಿ ನಮ್ಮ ಕಲಿಕಾ ಸಂಸ್ಥೆಗಳು ಗರಿಷ್ಠ ಗುಣಮಟ್ಟತೆಯನ್ನು ಕಾಯ್ದುಕೊಳ್ಳಬೇಕಿದೆ. ನಮ್ಮ ಯುವ ಜನತೆ ಮತ್ತಷ್ಟು ಸೃಜನಶೀಲ, ತಾಂತ್ರಿಕತೆಯಲ್ಲಿ ನಿಪುಣರಾಗಬೇಕಿದ್ದು 21ನೇ ಶತಮಾನವನ್ನು ಭಾರತದ್ದಾಗಿಸುವತ್ತ ಮುಂದುವರಿಯಬೇಕಿದೆ ಎಂದು ಹೇಳಿದರು.
 
ಮಹಿಳೆ ವಿರುದ್ಧ ಹಿಂಸೆ ಕಳವಳಕಾರಿ
 
ಮಹಿಳೆಯರ ವಿರುದ್ಧ ನಡೆಯುತ್ತಿರುವ ಅತ್ಯಾಚಾರ, ಕೊಲೆ, ರಸ್ತೆಯಲ್ಲಿ ಕಿರುಕುಳ, ಅಪಹರಣ, ವರದಕ್ಷಿಣೆ ಸಾವು ಇತ್ಯಾದಿಗಳು ಹೆದರಿಕೆ ಹುಟ್ಟಿಸುವಂತಿದ್ದು ತೀವ್ರ ಕಳವಳಕಾರಿಯಾಗಿದೆ ಎಂದು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಹೇಳಿದ್ದಾರೆ. ಈ ವಿಚಾರದಲ್ಲಿ ಮಹಿಳೆಯರ ಗೌರವ ರಕ್ಷಣೆಗೆ ನಾಡಿನ ಜನತೆ ಮುಂದಾಗಬೇಕಿದೆ ಎಂದವರು ಕರೆ ನೀಡಿದರು. ಅಲ್ಲದೇ ಮಹಿಳೆಯರನ್ನು ಗೌರವಿಸುವ, ಅಧಿಕಾರ ನೀಡುವ ಕ್ರಮದಿಂದ ಮಾತ್ರ ದೇಶವೊಂದು ನಿಜವಾದ ವಿಶ್ವ ಶಕ್ತಿಯಾಗಬಹುದು ಎಂದು ಹೇಳಿದರು.
 

ವೆಬ್ದುನಿಯಾವನ್ನು ಓದಿ