7 ವರ್ಷ ಶಿಕ್ಷೆಗೊಳಗಾದ ಗರ್ಭಿಣಿಗೆ 11 ತಿಂಗಳು ಜಾಮೀನು

ಗುರುವಾರ, 4 ಫೆಬ್ರವರಿ 2016 (12:13 IST)
ವರದಕ್ಷಿಣೆ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟು 7 ವರ್ಷ ಶಿಕ್ಷೆಗೊಳಗಾಗಿರುವ 5 ತಿಂಗಳ ಗರ್ಭಿಣಿಗೆ ಗುಜರಾತ್ ನ್ಯಾಯಾಲಯ 11 ತಿಂಗಳ ಜಾಮೀನು ನೀಡಿದೆ. ಭಾವನಾ ಪ್ರಜಾಪತಿ (30) ತನ್ನ ಮಗುವಿನೊಂದಿಗೆ ಡಿಸೆಂಬರ್ 31, 2016ರಂದು  ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ಕೋರ್ಟ್ ಆದೇಶಿಸಿದೆ. 

ಅತ್ತಿಗೆ ಜಲ್ಪಾ ಪ್ರಜಾಪತಿ ಸಾವಿಗೆ ಸಂಬಂಧಿಸಿದಂತೆ ಭಾವನಾ ಮತ್ತು ಆಕೆಯ ಕುಟುಂಬದ ಇತರ ಸದಸ್ಯರು ಶಿಕ್ಷೆಗೊಳಗಾಗಿದ್ದು ಅವರೆಲ್ಲ 7 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಿದೆ. ಭಾವನಾಗೆ ಈಗಾಗಲೇ 2 ವರ್ಷದ ಮಗುವೊಂದಿದ್ದು ಎರಡು ಮಕ್ಕಳ ಜತೆ ಆಕೆ ಈ ವರ್ಷದ ಅಂತ್ಯಕ್ಕೆ ಜೈಲಿಗೆ ಮರಳಬೇಕಿದೆ. 7 ವರ್ಷದೊಳಗಿನ ಮಕ್ಕಳಿಗೆ ತಮ್ಮೊಂದಿಗೆ ಇಟ್ಟುಕೊಳ್ಳಲು ಕೈದಿಗಳಿಗೆ ಕೋರ್ಟ್ ಅನುಮತಿ ನೀಡುತ್ತದೆ.
 
ಮಾನವೀಯ ನೆಲೆಯ ಮೇಲೆ ಕೋರ್ಟ್ ಆಕೆಗೆ ಜಾಮೀನು ನೀಡಿದೆ. 
 
2006ರಲ್ಲಿ ಅತ್ತಿಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಾಗ ಭಾವನಾಗೆ ವಿವಾಹವೂ ಆಗಿರಲಿಲ್ಲ. 20 ವರ್ಷದ ಆಕೆಯ ಜತೆ ಪೋಷಕರು ಮತ್ತು ಇಬ್ಬರು ಸಹೋದರರು ಕೂಡ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದರು. 2008ರಲ್ಲಿ ಕೋರ್ಟ್ ಭಾವನಾಗೆ ಜಾಮೀನು ನೀಡಿದಾಗ ಆಕೆಗೆ ಮದುವೆಯಾಗಿತ್ತು. 2014ರಲ್ಲಿ ಮಗು ಕೂಡ ಜನಿಸಿತ್ತು. ಈಗ  ಮತ್ತೆ ಗರ್ಭಿಣಿಯಾಗಿರುವ ಆಕೆಗೆ ಕೋರ್ಟ್ 11 ತಿಂಗಳ ಜಾಮೀನು ನೀಡಿದೆ. 

ವೆಬ್ದುನಿಯಾವನ್ನು ಓದಿ