ಬಾಯ್‌ಫ್ರೆಂಡ್ 150 ಅಡಿ ಎತ್ತರದಿಂದ ದೂಡಿದರೂ ಬದುಕುಳಿದ ಗರ್ಭಿಣಿ ಮಹಿಳೆ

ಶನಿವಾರ, 18 ಏಪ್ರಿಲ್ 2015 (17:22 IST)
ಗರ್ಭಿಣಿಯಾಗಿದ್ದ ತನ್ನ ಪ್ರಿಯತಮೆಯಿಂದ ಶಾಶ್ವತವಾಗಿ ಮುಕ್ತಿ ಹೊಂದುವ ದುರಾಲೋಚನೆ ಮಾಡಿದ ಯುವಕನೊಬ್ಬ ಆಕೆಯನ್ನು ಎತ್ತರದ ಪ್ರದೇಶವೊಂದಕ್ಕೆ ಕೊಂಡೊಯ್ದು ಮುಖವನ್ನು ಕಲ್ಲಿನಿಂದ ಜಜ್ಜಿ 150 ಅಡಿಯಿಂದ ತಳ್ಳಿ ಸತ್ತಳೆಂದು ಭಾವಿಸಿ ಹಿಂತಿರುಗಿದ ಅಮಾನುಷ ಘಟನೆ ನಹಾರ್‌ಗಢ್‌ನಲ್ಲಿ ನಡೆದಿದೆ. ವಿಚಿತ್ರವೆಂದರೆ ಪೀಡಿತ ಯುವತಿ ಪವಾಡಸದೃಶವಾಗಿ ಬದುಕಿದ್ದಾಳೆ. 


 
ವರದಿಗಳ ಪ್ರಕಾರ ಕಳೆದ ಶುಕ್ರವಾರ ಈ ಘಟನೆ ನಡೆದಿದ್ದು, ಕೊಲೆ ಯತ್ನ ನಡೆದ 12 ತಾಸುಗಳ ನಂತರ ಪ್ರಜ್ಞೆ ಮರಳಿ ಪಡೆದುಕೊಂಡ 22 ವರ್ಷದ ಯುವತಿ ಸಹಾಯಕ್ಕಾಗಿ ಕೇಳಿಕೊಂಡಿದ್ದಾಳೆ. ಬೆಳಗಿನ ಜಾಗಿಂಗ್‌ಗೆಂದು ಬಂದ ಕೆಲ ಜನರು ಆರ್ತನಾದವನ್ನು ಕೇಳಿ ಯುವತಿಯನ್ನು ರಕ್ಷಿಸಿದ್ದಾರೆ. 
 
ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಅತ್ಯಾಚಾರ, ವಂಚನೆ ಮತ್ತು ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಪೀಡಿತೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಗರ್ಭಪಾತ ಮಾಡಿಕೊಳ್ಳಲು ಮನಸ್ಸೊಪ್ಪದೆ ಪ್ರಿಯಕರನ ಬಳಿ ಮದುವೆಯಾಗುವಂತೆ ಕೇಳಿಕೊಂಡಿದ್ದಳು. ಆದರೆ ಆತ ಅದಕ್ಕೊಪ್ಪದೆ ಕೊಲ್ಲುವ ಸಂಚನ್ನು ರೂಪಿದ್ದಾನೆ. 
 
ಆರೋಪಿಯನ್ನು ನರೇಂದ್ರ ಕುಮಾರ್ ಎಂದು ಗುರುತಿಸಲಾಗಿದ್ದು ಆತ ತರಕಾರಿ ವ್ಯಾಪಾರಿಯಾಗಿದ್ದಾನೆ. ಯುವತಿ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. 
 
ಯುವತಿ ಗರ್ಭಿಣಿ ಎಂಬ ವಿಷಯ ತಿಳಿದು ಬರುತ್ತಿದ್ದಂತೆ ಆಕೆಯನ್ನು ಆಟೋದಲ್ಲಿ ನಹಾರಗಢ್ ಗುಡ್ಡಕ್ಕೆ ಕರೆದುಕೊಂಡು ಹೋದ ಆರೋಪಿ ಕಲ್ಲಿನಿಂದ ಅನೇಕ ಬಾರಿ ಆಕೆಯ ಮುಖಕ್ಕೆ ಜಜ್ಜಿ ನಂತರ 150 ಅಡಿ ಎತ್ತರದಿಂದ ಕೆಳಕ್ಕೆ ನೂಕಿದ್ದಾನೆ. 
 
ಆದರೆ ಪೊದೆಗಳ ಮೇಲೆ ಬಿದ್ದಿದ್ದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. 

ವೆಬ್ದುನಿಯಾವನ್ನು ಓದಿ