ಬಜೆಟ್ ಮಂಡನೆ ನನ್ನ ಪರೀಕ್ಷೆ, ಗೆಲ್ಲುವ ವಿಶ್ವಾಸವಿದೆ: ಮೋದಿ

ಸೋಮವಾರ, 29 ಫೆಬ್ರವರಿ 2016 (11:23 IST)
ಇಂದು ಮಂಡನೆಯಾಗಲಿರುವ ಹಣಕಾಸು ಬಜೆಟ್ ದೇಶದ 125ಕೋಟಿ ಜನರ ಎದುರು ನಾನು ನೀಡುವ ಪರೀಕ್ಷೆಯಾಗಲಿದೆ, ಆದರೆ ಯಶಸ್ಸನ್ನು ಪಡೆಯುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
 
ರವಿವಾರ ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮಾರ್ಚ್ ತಿಂಗಳಲ್ಲಿ ಬೋರ್ಡ್ ಪರೀಕ್ಷೆಗಳನ್ನೆದುರಿಸುತ್ತಿರುವ 10ಮತ್ತು 12ನೇ ತರಗತಿಯ ಮಕ್ಕಳಿಗೆ ಪ್ರೇರಣಾದಾಯಕ ಮಾತುಗಳನ್ನಾಡಿದರು. 
 
ನಾಳೆ ನಾನು ಸಹ ಪರೀಕ್ಷೆಯನ್ನೆದುರಿಸಬೇಕಾಗಿದೆ.  125 ಕೋಟಿ ಜನರು ಈ ಪರೀಕ್ಷೆಯನ್ನು ನಡೆಸಲಿದ್ದಾರೆ. ಅದರ ಬಗ್ಗೆ ನಿಮಗೆ ಗೊತ್ತಿದೆಯೋ ಅಥವಾ ಇಲ್ಲವೋ? ನಾಳೆ ಮಂಡನೆಯಾಗಲಿರುವ ಬಜೆಟ್ ನನ್ನ ಪಾಲಿಗೆ ಪರೀಕ್ಷೆ. ಅದನ್ನೆದುರಿಸಲು ನಾನೆಷ್ಟು ಆರೋಗ್ಯ ಮತ್ತು ವಿಶ್ವಾಸದಲ್ಲಿದ್ದೇನೆ ಎಂಬುದನ್ನು ನೀವು ನನ್ನ ಧ್ವನಿಯಲ್ಲೇ ತಿಳಿದುಕೊಳ್ಳಲು ಸಾಧ್ಯ. ನಾವೆಲ್ಲರೂ ಯಶಸ್ಸನ್ನು ಪಡೆಯುವಂತಾಗಲಿ. ಆಗ ದೇಶವೂ ಸಹ ಯಶಸ್ಸನ್ನು ಪಡೆಯುತ್ತದೆ ಎಂದು ಮೋದಿ ಹೇಳಿದ್ದಾರೆ.
 
ನೀವು ಕೂಡ ನಿಮ್ಮ ಬೋರ್ಡ್ ಎಕ್ಸಾಂ ಬರೆಯುತ್ತಿರುವಿರಿ. ನಿಮ್ಮ ಪೋಷಕರು, ಶಿಕ್ಷಕರು, ಸಂಬಂಧಿಕರು ಇಟ್ಟಿರುವ ನಿರೀಕ್ಷೆಗಳ ಭಾರದಲ್ಲಿ ಪರೀಕ್ಷೆ ಬರೆಯದಿರಿ,  ಆತ್ವವಿಶ್ವಾಸದಿಂದ ಎದುರಿಸಿ.  ಏನೇ ಮಾಡಬೇಕಾದರು ಮೊದಲು ಗುರಿಯನ್ನಿಟ್ಟುಕೊಂಡಿರಬೇಕು. ಬಳಿಕ ಆ ಗುರಿಯನ್ನು ಸಾಧಿಸಲು ಅತ್ಯಗತ್ಯವಾದ ತಯಾರಿಯನ್ನು ಮಾಡಿಕೊಳ್ಳಬೇಕು. ಪರೀಕ್ಷೆಗಳೆಂದರೆ ಕೇವಲ ಅಂಕಕ್ಕೆ ಸಂಬಂಧಿಸಿದ್ದಲ್ಲ.  ಪ್ರತಿ ಪರೀಕ್ಷೆ ಮಹತ್ತರ ಉದ್ದೇಶವನ್ನು ಸಾಧಿಸುವತ್ತ ಇಡುವ ಹೆಜ್ಜೆ 
ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.
 
ಮಕ್ಕಳಿಗೆ ಆತ್ಮವಿಶ್ವಾಸ ತುಂಬಲು ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್‌, ವಿಜ್ಞಾನಿ ಸಿ.ಎನ್‌.ಆರ್‌. ರಾವ್‌ ಮತ್ತು ಆಧ್ಯಾತ್ಮಿಕ ಗುರು ಮುರಾರಿ ಬಾಪು ಅವರ ಸಂದೇಶಗಳನ್ನು ಕೂಡಾ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು.
 
ಚಿಂತಿಸದಿರಿ,ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಿ ಎಂದು ರಾವ್ ಸಲಹೆ ನೀಡಿದರೆ, ನಿಮ್ಮ ಚಿಂತನೆ ಸಕಾರಾತ್ಮಕವಾಗಿರಲಿ. ಆಗ ಮಾತ್ರ ಸಕಾರಾತ್ಮಕ ಫಲಿತಾಂಶ ಬರುವುದು. ನಿರಾಳವಾಗಿ ಪರೀಕ್ಷೆ ಬರೆದರೆ ಉತ್ತಮ ಫಲಿತಾಂಶ ದೊರೆಯಲಿದೆ’ ಎಂದು ಸಚಿನ್ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲೆತ್ನಿಸಿದರು. 

ವೆಬ್ದುನಿಯಾವನ್ನು ಓದಿ