ಹುತಾತ್ಮ ಯೋಧರಿಬ್ಬರಿಗೆ ರಾಷ್ಟ್ರಪತಿಯಿಂದ "ಆಶೋಕ ಚಕ್ರ' ಪ್ರದಾನ

ಸೋಮವಾರ, 26 ಜನವರಿ 2015 (14:30 IST)
ಗಣರಾಜ್ಯೋತ್ಸವ ಸಂಭ್ರಮದ ಸಂದರ್ಭದಲ್ಲಿ ದೇಶ ರಕ್ಷಣೆಯ ಕರ್ತವ್ಯದಲ್ಲಿ ಉಗ್ರರೊಂದಿಗೆ ಹೋರಾಡುತ್ತಾ ವೀರಮರಣವನ್ನಪ್ಪಿದ ಇಬ್ಬರು ಹುತಾತ್ಮ ಯೋಧರ ಕುಟುಂಬದವರಿಗೆ ಆಶೋಕ ಚಕ್ರ ಶೌರ್ಯ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಪ್ರದಾನಿಸಿದರು.
 
ಮೇಜರ್‌ ಮುಕುಂದ್‌ ವರದರಾಜನ್‌ ಹಾಗೂ ನಾಯ್ಕ ನೀರಜ್‌ ಕುಮಾರ್‌ ಸಿಂಗ್‌ ಅವರೇ ಶೌರ್ಯ ಪ್ರಶಸ್ತಿಗೆ ಭಾಜನರಾದ ಹುತಾತ್ಮ ಯೋಧರು. ಇವರಿಬ್ಬರಿಗೆ ಮರಣಾನಂತರ ಈ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.
 
ರಾಜಪಥ್‌ನಲ್ಲಿ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದ ಬಳಿಕ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಬರಾಕ್‌ ಒಬಾಮ, ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಹಾಗೂ ಸೇನೆಯ ಮೂರೂ ವಿಭಾಗದ ದಂಡನಾಯಕರು ಹಾಗೂ ವಿವಿಧ ಗಣ್ಯರು ಮತ್ತು ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಮೇಜರ್‌ ವರದರಾಜನ್‌ ಹಾಗೂ ನೀರಜ್‌ ಕುಮಾರ್‌ ಸಿಂಗ್‌ ಅವರ ಪತ್ನಿಯರಿಗೆ ಈ ಪ್ರಶಸ್ತಿಯನ್ನು ನೀಡಿದರು.
 
ಕರ್ತವ್ಯನಿರ್ವಹಣೆಯ ಸಮಯದಲ್ಲಿ ತನ್ನ ನೆಲದ ಸಾರ್ವಭೌಮತೆ ಹಾಗೂ ಭದ್ರತೆಯನ್ನು ಕಾಪಾಡುವಲ್ಲಿ ಅಪ್ರತಿಮ ಶೌರ್ಯವನ್ನು ಪ್ರದರ್ಶಿಸುವ ಅಥವಾ ಇಂತಹ ಕಾರ್ಯದಲ್ಲಿ ತಮ್ಮ ಪ್ರಾಣವನ್ನು ಬಲಿದಾನ ಮಾಡುವ ಯೋಧರಿಗೆ ಪ್ರತಿಷ್ಠಿದ ಅಶೋಕ ಚಕ್ರ ಶೌರ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
 

ವೆಬ್ದುನಿಯಾವನ್ನು ಓದಿ