ರಕ್ಷಾಬಂಧನ: ರಾಷ್ಟ್ರಕ್ಕೆ ರಾಷ್ಟ್ರಪತಿ, ಪ್ರಧಾನಿ ಶುಭಾಶಯ

ಶನಿವಾರ, 29 ಆಗಸ್ಟ್ 2015 (12:59 IST)
ಇಂದು ಸಂಪೂರ್ಣ ದೇಶ ಭಾತೃತ್ವದ ಬಾಂಧವ್ಯವನ್ನು ಸಾರುವ ರಕ್ಷಾ ಬಂಧನವನ್ನು ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವಾಸಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. 
‘ಪವಿತ್ರ ರಾಖಿ ಸಹೋದರ ಮತ್ತು ಸಹೋದರಿಯರನ್ನು ಬೇರ್ಪಡಿಸಲಾಗದ ಪ್ರೀತಿ ಮತ್ತು ವಿಶ್ವಾಸದ ಬಂಧನದಲ್ಲಿ ಬೆಸೆಯುತ್ತದೆ.  ಭಾರತದ ಮಹಿಳೆಯರು ಅದರಲ್ಲೂ ನಿರ್ದಿಷ್ಟವಾಗಿ ಹೆಣ್ಣು ಮಗುವಿನ ಕಲ್ಯಾಣಕ್ಕಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳುತ್ತೇವೆ ಎಂದು ಈ ಶುಭದಿನದಂದು ಶಪಥಗೈಯ್ಯೋಣ’, ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
 
‘ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ನಾನು ಭಾರತದ ಪ್ರಜೆಗಳಿಗೆಲ್ಲರಿಗೂ ಶುಭಾಶಯಗಳನ್ನು ಸಲ್ಲಿಸುತ್ತೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
 
ರಕ್ಷಾ ಬಂಧನ ಹಿಂದೂ ಧರ್ಮಾನುಯಾಯಿಗಳು ಆಚರಿಸುವ ಒಂದು ಪ್ರಮುಖ ಹಬ್ಬವಾಗಿದ್ದು ಸಹೋದರ - ಸಹೋದರಿಯರ ಬಾಂಧವ್ಯವನ್ನು ಸಾರುವ ಉದ್ದೇಶದಿಂದ ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿಗೆ ರಾಖಿ ಕಟ್ಟುತ್ತಾರೆ ಮತ್ತು ಅವರ ಯಶ, ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಪ್ರತಿಯಾಗಿ ಸಹೋದರರು ಜೀವನ ಪರ್ಯಂತ ಸಹೋದರಿಯರನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾರೆ.

ವೆಬ್ದುನಿಯಾವನ್ನು ಓದಿ