ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ: ಸಂಸದರಿಗೆ ರಾಷ್ಟ್ರಪತಿ ಕರೆ

ಮಂಗಳವಾರ, 23 ಫೆಬ್ರವರಿ 2016 (16:22 IST)
ಸಂಸತ್ತು ದೇಶದ ಜನತೆಯ ಆಶೋತ್ತರಗಳ ಪ್ರತೀಕವಾಗಿರುವುದರಿಂದ ಸಂಸದರು ಕಲಾಪಕ್ಕೆ ಅಡ್ಡಿಪಡಿಸುವ ಬದಲು ಜವಾಬ್ದಾರಿಯುತವಾಗಿ ಕರ್ತವ್ಯನಿರ್ವಹಿಸಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೆ ನೀಡಿದ್ದಾರೆ.
 
ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಮುಖರ್ಜಿ, ಕೇಂದ್ರ ಸರಕಾರ ಸಂಸತ್ ಅಧಿವೇಶನದಲ್ಲಿ ಕಲಾಪವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲಿದೆ ಎಂದು ಘೋಷಿಸಿದ್ದಾರೆ.
 
ದೇಶದ ಜನತೆಯ ಅಭಿಪ್ರಾಯಗಳ ಪ್ರತಿಬಿಂಬವಾದ ಸಂಸತ್ತಿನಲ್ಲಿ ಧನಾತ್ಮಕ ರೀತಿಯಲ್ಲಿ ಚರ್ಚೆಗೆ ಸ್ವಾಗತವಿದೆ. ಆದರೆ, ಕಲಾಪಕ್ಕೆ ಅಡ್ಡಿಯುಂಟು ಮಾಡುವುದು, ಬಹಿಷ್ಕರಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು. 
 
ಸಂಸದರು ಪರಸ್ಪರ ಸಹಕಾರ ಸಮನ್ವಯತೆಯಿಂದ ದೇಶದಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಭವಿಷ್ಯದ ಭಾರತ ನಿರ್ಮಾಣಕ್ಕೆ ಎಲ್ಲರು ಒಂದಾಗಿ ಕೈ ಜೋಡಿಸಬೇಕು ಎಂದು ಕೋರುವುದಾಗಿ ತಿಳಿಸಿದ್ದಾರೆ. 
 
ಕಳೆದ ಕೆಲ ಅಧಿವೇಶನಗಳಲ್ಲಿ ವಿಪಕ್ಷಗಳು ಮತ್ತು ಕೇಂದ್ರ ಸರಕಾರದ ಇಚ್ಚಾಶಕ್ತಿಯ ಕೊರತೆಯಿಂದಾಗಿ ಕಲಾಪಗಳು ಅಸ್ಥವ್ಯಸ್ಥಗೊಂಡಿವೆ. ಲೋಕಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತರೂ ರಾಜ್ಯಸಭೆಯಲ್ಲಿ ಬಹುಮತದ ಕೊರತೆಯಿಂದ ಮಸೂದೆ ನೆನೆಗುದಿಗೆ ಬೀಳುವುದು ಸರಿಯಲ್ಲ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ