ಬಿಗಿ ಭದ್ರತೆಯಲ್ಲಿ ನಡೆಯುತ್ತಿದೆ ಪಿಯು ಮರು ಪರೀಕ್ಷೆ

ಮಂಗಳವಾರ, 12 ಏಪ್ರಿಲ್ 2016 (09:32 IST)
ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಇಂದು ಮತ್ತೆ ಎರಡನೇ ಬಾರಿ ರಸಾಯನ ಶಾಸ್ತ್ರ ಪರೀಕ್ಷೆ ಬರೆಯುತ್ತಿದ್ದಾರೆ.  ಬಿಗಿಭದ್ರತೆ, ಶಿಕ್ಷಣ ಸಚಿವರು ಹಾಗೂ ಉನ್ನತಾಧಿಕಾರಿಗಳ ಕಣ್ಗಾವಲಿನ ಮಧ್ಯೆ  ದ್ವಿತೀಯ ಪಿಯುಸಿ ರಸಾಯನ ವಿಜ್ಞಾನ ವಿಷಯದ ಮರುಪರೀಕ್ಷೆ ಪ್ರಾರಂಭವಾಗಿದೆ. 
 
ನಿಗದಿ ಪಡಿಸಿದ ದಿನಕ್ಕೆ ಬರೆದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರೀಕ್ಷೆಯನ್ನು ನಿಗದಿ ಪಡಿಸಲಾಗಿತ್ತು. ವಿದ್ಯಾರ್ಥಿಗಳು ಇನ್ನೆನು ಪರೀಕ್ಷೆ ಬರೆಯಲು ಪ್ರಾರಂಭಿಸಬೇಕು ಎನ್ನುವಾಗ ಎರಡನೆಯ ಬಾರಿ ಕೂಡ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನಲೆಯಲ್ಲಿ ಪರೀಕ್ಷೆ ಮುಂದೂಡಲಾಗಿತ್ತು. ಇಂದು ಮತ್ತೆ ಪರೀಕ್ಷೆ ನಡೆಯುತ್ತಿದೆ. 
 
ಸುಮಾರು 1.72 ಲಕ್ಷ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಎದುರಿಸುತ್ತಿದ್ದು 968 ಕೇಂದ್ರಗಳಲ್ಲಿ ಬೆಳಿಗ್ಗೆ 9ಕ್ಕೆ ಪರೀಕ್ಷೆ ಪ್ರಾರಂಭವಾಗಿದ್ದು 12ರ ವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಕೆಲ ಹೊತ್ತಿನ ಮೊದಲೇ ಪೋಷಕರನ್ನು ಪರೀಕ್ಷಾ ಕೇಂದ್ರದ ಆವರಣದಿಂದ ದೂರಕ್ಕೆ ಕಲುಹಿಸಲಾಗಿದೆ. ಪ್ರತಿ ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಬಿಡಲಾಗುತ್ತಿದೆ. 
 
ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ತಡೆಯಲು ಪ್ರಶ್ನೆ ಪತ್ರಿಕೆಯನ್ನ ಸ್ಟ್ರಾಂಗ್ ರೂಂನಲ್ಲಿಟ್ಟು ಭದ್ರ ಪಡಿಸಲಾಗಿತ್ತು. 
 
6 ವಿಧದ ಪ್ರಶ್ನೆ ಪತ್ರಿಕೆಯನ್ನು ತಯಾರು ಮಾಡಲಾಗಿತ್ತು. ಪರೀಕ್ಷೆ ನಡೆಯುವ 1 ಗಂಟೆ ಮುಂಚೆ ಯಾವ ಪ್ರಶ್ನೆ ಪತ್ರಿಕೆ ವಿತರಿಸಬೇಕು ಎಂದು ಪಿಯು ಬೋರ್ಡ್ ನೀಡಿದ ನಿರ್ದೇಶನದ ಮೇರೆಗೆ ಪ್ರಶ್ನೆ ಪತ್ರಿಕೆಯನ್ನು ವಿತರಿಸಲಾಯಿತು. 
 
ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಒಂದೇ ವಿಷಯದ ಪತ್ರಿಕೆಗೆ ಮೂರು ಸಲ ಪರೀಕ್ಷೆ ನಡೆಸುತ್ತಿರುವುದು ಅಪರೂಪ.
 
ಪ್ರಶ್ನೆಪತ್ರಿಕೆಗಳನ್ನು ಧಾರವಾಡದ ಖಜಾನೆಯಿಂದ ಇತರ 29 ಜಿಲ್ಲೆಗಳಿಗೆ ಸೋಮವಾರ ಬೆಳಿಗ್ಗೆ ಬಿಗಿ ಭದ್ರತೆಯಲ್ಲಿ ರವಾನಿಸಲಾಗಿತ್ತು. 
 
 

ವೆಬ್ದುನಿಯಾವನ್ನು ಓದಿ