ಮೋಗಾ ಲೈಂಗಿಕ ಶೋಷಣೆ, ಹತ್ಯೆ ದೈವೇಚ್ಛೆ ಎಂದ ಸಚಿವ

ಶನಿವಾರ, 2 ಮೇ 2015 (15:06 IST)
ಲೈಂಗಿಕ ಶೋಷಣೆಗೊಳಗಾಗಿ ಚಲಿಸುತ್ತಿದ್ದ ಬಸ್‌ನಿಂದ ತಳ್ಳಲ್ಪಟ್ಟ ಬಾಲಕಿ, ಕೊನೆಗೆ ದುರುಳರಿಂದ ಬಸ್‌ನಿಂದ ಹೊರಗೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದು ದೇವರ ಇಷ್ಟದಂತೆ ನಡೆದ ಘಟನೆ ಎಂದು ಹೇಳುವುದರ ಮೂಲಕ ಪಂಜಾಬ್ ಶಿಕ್ಷಣ ಸಚಿವ ಸುರ್ಜಿತ್ ಸಿಂಗ್ ರಾಖ್ರಾ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.

ಅಪಘಾತಗಳನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಎಲ್ಲವೂ ಭಗವಂತನ ಇಷ್ಟದಂತೆ ಆಗುತ್ತದೆ ಎಂದು ಸುರ್ಜಿತ್ ಸಿಂಗ್ ರಾಖ್ರಾ ಹೇಳಿದ್ದಾರೆ. 
 
ಪಂಜಾಬ್ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಖ್ ಬೀರ್ ಸಿಂಗ್ ಬಾದಲ್ ಅವರಿಗೆ ಸೇರಿದ ಬಸ್‌ನಲ್ಲಿ ನಡೆದ ಕರಾಳ ಪೈಶಾಚಿಕ ಕೃತ್ಯ ದೇವರ ಇಚ್ಛೆ ಎಂದು ಹೇಳಿರುವ ಸಚಿವರ ಹೇಳಿಕೆಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
 
"ಭವಿಷ್ಯದಲ್ಲಿ ನಾವು ಈ ರೀತಿಯಾಗದಂತೆ ಎಚ್ಚರಿಕೆಯನ್ನು ವಹಿಸುತ್ತೇವೆ. ಆದರೆ ಅಪಘಾತವಾಗಲಿ, ಇನ್ನೇನೆ ಆಗಲಿ, ಪ್ರಕೃತಿಯ ಮುಂದೆ ನಾವು ನಿಲ್ಲಲಾಗದು", ಎಂದು ರಾಖ್ರಾ ತಿಳಿಸಿದ್ದಾರೆ.
 
ಪಂಜಾಬ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮೃತ ಬಾಲಕಿಯ ಪೋಷಕರು ಪಂಜಾಬ್ ಉಪಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ ವಿರುದ್ಧ ಪ್ರಕರಣ ದಾಖಲಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
 
ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಾಲಕಿಯ ತಂದೆ, "ನಮಗೆ ನ್ಯಾಯ ಬೇಕು. ಬಸ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ ಅವರದ್ದಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ತಮ್ಮ ಮಗಳ ಅಂತಿಮ ಸಂಸ್ಕಾರ ನಡೆಸುವುದಿಲ್ಲ. ಆರ್ಬಿಟ್ ಅವಿಯೇಷನ್ ಬಸ್ ಪರವಾನಿಗೆಗಳನ್ನು ರದ್ದು ಪಡಿಸಬೇಕು. 50 ಲಕ್ಷ ಪರಿಹಾರ ಧನ ನೀಡಬೇಕುಜತೆಗೆ ತಮ್ಮ ಕುಟುಂಬದ ಒಬ್ಬ ಸದಸ್ಯರಿಗೆ ಸರಕಾರಿ ನೌಕರಿ ಕೊಡಿಸಬೇಕು", ಎಂದು ಹಠ ಹಿಡಿದಿದ್ದಾರೆ. 
 
ಬಾಲಕಿಯ ಮರಣೋತ್ತರ ಪರೀಕ್ಷೆಗೆ ಸಹ ಕುಟುಂಬದವರು ಅನುಮತಿ ನೀಡಿರಲಿಲ್ಲ. 

ವೆಬ್ದುನಿಯಾವನ್ನು ಓದಿ