ಪಂಜಾಬ್ ಉಗ್ರರ ದಾಳಿ: 75 ಪ್ರಯಾಣಿಕರ ಪ್ರಾಣ ಉಳಿಸಿದ ಚಾಣಾಕ್ಷ ಚಾಲಕ

ಸೋಮವಾರ, 27 ಜುಲೈ 2015 (19:52 IST)
ಇಂದು ಬೆಳಿಗ್ಗೆ ಉಗ್ರರು ಬಸ್ ಮೇಲೆ ದಾಳಿ ಮಾಡಿದಾಗ ಬಸ್ ಚಾಲಕ ತನ್ನ ಚಾಣಾಕ್ಷತೆಯನ್ನು ಮೆರೆದು ಹಲವಾರು ಪ್ರಯಾಣಿಕರ ಪ್ರಾಣ ಉಳಿಸಿ ಶೌರ್ಯವನ್ನು ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. 
 
ಪಂಜಾಬ್ ಸಾರಿಗೆ ಸಂಸ್ಥೆಯ ಚಾಲಕ ನಾನಕ್ ಚಂದ್, ಉಗ್ರರು ಗುಂಡಿನ ದಾಳಿ ಮಾಡಿದರೂ ಹೆದರದೆ ಅವರ ಕಾರಿನ ಮುಂದೆ ಬಸ್ ನುಗ್ಗಿಸುವ ಮೂಲಕ ಅವರನ್ನೇ ಬೆದರಿಸಿದ್ದಾನೆ.  
 
ನಾಲ್ಕು ಮಂದಿ ಉಗ್ರರ ತಂಡ ಬಸ್ ತಮ್ಮತ್ತ ಬರುತ್ತಿರುವುದನ್ನು ಕಂಡು ಹಿಂದಕ್ಕೆ ಹೋಗಿದ್ದರಿಂದ ಬಸ್‌ನ್ನು ವೇಗವಾಗಿ ಚಲಾಯಿಸಿ ಪರಾರಿಯಾಗುವಲ್ಲಿ ಚಾಲಕ ಯಶಸ್ವಿಯಾಗಿದ್ದಾನೆ. 
 
ಬಸ್‌ ಮೇಲೆ ನಿರಂತರವಾಗಿ ಉಗ್ರರು ಗುಂಡು ಹಾರಿಸುತ್ತಿದ್ದರೂ ಲೆಕ್ಕಿಸದೆ ಬಸ್‌ನ್ನು ವೇಗವಾಗಿ ಚಲಾಯಿಸಿಕೊಂಡು ಸರಕಾರಿ ಆಸ್ಪತ್ರೆ ತಲುಪಿದ್ದಾನೆ. ನಂತರ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
 
ಬಸ್‌ನಲ್ಲಿ 75 ಜನ ಪ್ರಯಾಣಿಕರಿದ್ದರು. ಅವರ ಜೀವವನ್ನು ಉಳಿಸುವುದು ಮಹತ್ವದ ಸಂಗತಿ ಎಂದು ನಾನು ಭಾವಿಸಿದೆ. ಆದ್ದರಿಂದ ನಾನು ಬಸ್ ನಿಲ್ಲಿಸಲಿಲ್ಲ ಎಂದು ಚಂದ್ ಸುದ್ದಿಗಾರರಿಗೆ ತಿಳಿಸಿದ್ದಾನೆ.
 
ಬಸ್ ಚಾಲಕನ ಜಾಗ್ರತೆ ಮತ್ತು ಚಾಣಾಕ್ಷತನ 75 ಪ್ರಯಾಣಿಕರ ಜೀವ ಉಳಿಸಿದೆ. ಇಲ್ಲವಾದಲ್ಲಿ ಪ್ರಯಾಣಿಕರು ಉಗ್ರರಿಗೆ ಸುಲಭದ ಟಾರ್ಗೆಟ್ ಆಗುತ್ತಿದ್ದರು ಎಂದು ಪಂಜಾಬ್ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರು ಶ್ಲಾಘಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ