ತ್ವರಿತ, ಪಾರದರ್ಶಕ ನಿರ್ಧಾರಗಳು ಮೋದಿ ಸರ್ಕಾರದ ಹೆಗ್ಗುರುತು: ಜೇಟ್ಲಿ

ಶುಕ್ರವಾರ, 22 ಮೇ 2015 (17:48 IST)
ಕಳೆದೊಂದು ವರ್ಷದಲ್ಲಿ ಭಾರತ ಸಂಪೂರ್ಣ ರೂಪಾಂತರ ಕಂಡಿದೆ. ಅದು ಕೇವಲ ಖಚಿತತೆಯಲ್ಲಷ್ಟೇ ಅಲ್ಲ. ತ್ವರಿತಗತಿ, ಸ್ಪಷ್ಟತೆ ಮತ್ತು ಪಾರದರ್ಶಕ ಪರಿಭಾಷೆಯಲ್ಲಿ ಕೂಡ ಬದಲಾವಣೆಯಾಗಿದ್ದು, ಇದು ದೇಶಕ್ಕೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟಿದೆ, ಎಂದು ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಹೇಳಿದ್ದಾರೆ. 

ಕಳೆದ ವರ್ಷ ಮೇ 26 ರಂದು ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಹಣಕಾಸು ಸಚಿವರು, "ಪ್ರತಿರೋಧಗಳ ನಡುವೆಯೂ ಬೆಳವಣಿಗೆ ಮತ್ತು ಅಭಿವೃದ್ಧಿ ಹೆಚ್ಚಿಸಿಕೊಳ್ಳಲು ಬಹುತೇಕ ಪ್ರತಿದಿನ ಅಥವಾ ವಾರದೊಳಗೆ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ", ಎಂದಿದ್ದಾರೆ. 
 
"ಸರ್ಕಾರ ಸಾಗಬೇಕಾದ ದಿಕ್ಕಿನಲ್ಲಿ ಸಂಪೂರ್ಣ ಸ್ಪಷ್ಟತೆ ಇದೆ ಮತ್ತು ನಮ್ಮ ಗುರಿ ಬೆಳವಣಿಗೆ ಮತ್ತು ಅಭಿವೃದ್ಧಿ ಕಡೆ ಸಾಗುತ್ತಿದೆ," ಎಂದು ಅವರು ತಮ್ಮ ಸರ್ಕಾರದ ಆಡಳಿತದ ಬಗ್ಗೆ ಬೆನ್ನು ಚಪ್ಪರಿಸಿಕೊಂಡಿದ್ದಾರೆ. 
 
"ರೈಲ್ವೆ, ವಿದ್ಯುತ್, ಕಲ್ಲಿದ್ದಲು, ಗಣಿಗಾರಿಕೆ, ಗ್ರಾಮೀಣ ರಸ್ತೆಗಳು, ಟೆಲಿಕಾಂ, ಹೆದ್ದಾರಿಗಳು, ನಗರಾಭಿವೃದ್ಧಿ, ಹಣಕಾಸು ಸೇವೆಗಳು, ಸಬ್ಸಿಡಿಗಳು ಮತ್ತು ಪೆಟ್ರೋಲಿಯಂ ನಂತಹ ಕ್ಷೇತ್ರಗಳಲ್ಲಿ ಪಾರದರ್ಶಕ ರೀತಿಯಲ್ಲಿ ಕೆಲವು ವೇಗದ ಮತ್ತು ದೂರಗಾಮಿ ನಿರ್ಧಾರಗಳನ್ನು ತೆಗದುಕೊಳ್ಳಲಾಯಿತು.ಈ ನಿರ್ಧಾರಗಳು ಭವಿಷ್ಯದ ಬೆಳವಣಿಗೆಗೆ ಸ್ಪಷ್ಟ ಹೆಜ್ಜೆಗಳಾಗಿವೆ", ಎಂದು ಜೇಟ್ಲಿ ಹೇಳಿದ್ದಾರೆ. 
 
"ಭ್ರಷ್ಟಾಚಾರ ಮುಕ್ತ ಆಡಳಿತ, ಮತ್ತು ನಿರ್ಣಯ ತೆಗೆದುಕೊಳ್ಳುವುದು, ತಾರತಮ್ಯವಿಲ್ಲದ ನಿರ್ಧಾರ,ಪಾರದರ್ಶಿ ತಂತ್ರಗಳು ಈ ಸರ್ಕಾರದ ಪ್ರಮುಖ ಲಕ್ಷಣಗಳು. ಇತರ ಅನೇಕ ವಿಷಯಗಳ ನಡುವೆ, ಭಾರತದ ವಾಣಿಜ್ಯ ವಿಷಯಸೂಚಿಯಲ್ಲಿ ಏರಿಕೆಯಾಗಲು ಇವೆಲ್ಲವೂ ಕಾರಣವಾದವು", ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ